ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಂದೆ ಸ್ಟಾನ್ಲಿ ಜಾನ್ಸನ್ ಅವರು ಫ್ರಾನ್ಸ್ ನಾಗರಿಕತ್ವಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.
ಜನವರಿ 1ರಿಂದ ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಸಂಪೂರ್ಣ ಹೊರಬಂದಿದೆ. ಐರೋಪ್ಯ ಒಕ್ಕೂಟದೊಂದಿಗೆ ಬಾಂಧವ್ಯ ಉಳಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.
‘ತಾಯಿ ಫ್ರಾನ್ಸ್‌ನವರು’: ಸ್ಟಾನ್ಲಿ ಜಾನ್ಸನ್ ಅವರು ಯುರೋಪ್ ಸಂಸತ್‌ನ ಮಾಜಿ ಸದಸ್ಯರೂ ಹೌದು. ಕುಟುಂಬದ ನಂಟಿನ ಹಿನ್ನೆಲೆಯಲ್ಲಿ ಫ್ರಾನ್ಸ್ ನಾಗರಿಕತ್ವ ಬಯಸುತ್ತಿದ್ದೇನೆ ಎಂದು ಅವರು ‘ಆರ್‌ಟಿಎಲ್ ರೇಡಿಯೊ’ಕ್ಕೆ ತಿಳಿಸಿದ್ದಾರೆ.
‘ಸರಿಯಾಗಿ ನೋಡಿದರೆ ನಾನು ಫ್ರಾನ್ಸ್‌ನವ. ನನ್ನ ತಾಯಿ ಫ್ರಾನ್ಸ್‌ನಲ್ಲಿ ಜನಿಸಿದ್ದರು. ಅವರ ತಾಯಿ ಹಾಗೂ ಅಜ್ಜ ಪೂರ್ತಿಯಾಗಿ ಫ್ರಾನ್ಸ್‌ನವರೇ. ಹಾಗಾಗಿ ನನ್ನದಾಗಿದ್ದುದನ್ನು ಮತ್ತೆ ಪಡೆಯುತ್ತಿದ್ದೇನಷ್ಟೇ’ ಎಂದು 80 ವರ್ಷ ವಯಸ್ಸಿನ ಜಾನ್ಸನ್ ಹೇಳಿದ್ದಾರೆ.
‘ನಾನು ಯಾವತ್ತಿಗೂ ಯುರೋಪಿಯನ್, ಅದು ನಿಜ. ಬ್ರಿಟಿಷರನ್ನು ಯುರೋಪಿಯನ್ನರಲ್ಲ ಎಂದು ಹೇಳಲು ಸಾಧ್ಯವಿಲ್ಲ. ಐರೋಪ್ಯ ಒಕ್ಕೂಟದೊಂದಿಗೆ ನಂಟು ಹೊಂದಿರುವುದು ಬಹು ಮುಖ್ಯ’ ಎಂದು ಅವರು ಹೇಳಿದ್ದಾರೆ.
ಬೋರಿಸ್ ಜಾನ್ಸನ್ ಅವರು 2016ರ ಜನಮತ ಸಂಗ್ರಹದಲ್ಲಿ ಮುಂಚೂಣಿಯಲ್ಲಿದ್ದರಲ್ಲದೆ, ಐರೋಪ್ಯ ಒಕ್ಕೂಟದಲ್ಲಿರುವುದಕ್ಕಿಂತಲೂ ಸಂಪೂರ್ಣ ಸಾರ್ವಭೌಮ ರಾಷ್ಟ್ರವಾಗಿ ಬ್ರಿಟನ್ ಹೆಚ್ಚು ಏಳಿಗೆ ಹೊಂದಬಹುದು ಎಂದು ಹೇಳಿದ್ದರು.
ಆದರೆ ಇದೀಗ, ಐರೋಪ್ಯ ಒಕ್ಕೂಟದ ಜತೆ ಹೊಸ ವ್ಯಾಪಾರ ಒಪ್ಪಂದಕ್ಕೆ ಸಂಸತ್ ಅನುಮೋದನೆ ನೀಡಿದ್ದರಿಂದ, ‘ಮುಕ್ತ ವ್ಯಾಪಾರ ಒಪ್ಪಂದಕ್ಕೂ ನಾವು ತೆರೆದುಕೊಳ್ಳಲಿದ್ದೇವೆ’ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಸಂಪೂರ್ಣವಾಗಿ ಹೊರಬಂದ ಸಂದರ್ಭದಲ್ಲಿ ಶುಕ್ರವಾರ ಮಾತನಾಡಿದ್ದ ಬೋರಿಸ್ ಜಾನ್ಸನ್, ‘ಇದೊಂದು ಅಪೂರ್ವ ಕ್ಷಣ. ನಮ್ಮ ಸ್ವಾತಂತ್ರ್ಯ ನಮ್ಮ ಕೈಯಲ್ಲಿದೆ. ಮುಕ್ತ ವ್ಯಾಪಾರ ಒಪ್ಪಂದಕ್ಕೂ ನಾವು ತೆರೆದುಕೊಳ್ಳಲಿದ್ದೇವೆ’ ಎಂದು ಹೇಳಿದ್ದರು.
‘ಇದು, ಐರೋಪ್ಯ ರಾಷ್ಟ್ರವಾಗಿ ಬ್ರಿಟನ್ ಅಂತ್ಯಗೊಂಡಿದೆ ಎಂದರ್ಥವಲ್ಲ. ನಾವು ಅನೇಕ ವಿಧಗಳಲ್ಲಿ ಯುರೋಪ್ ನಾಗರಿಕತೆಯ ಸರ್ವಶ್ರೇಷ್ಠರು. ಇದು ಮುಂದುವರಿಯಲಿದೆ’ ಎಂದು ಜಾನ್ಸನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.