ಲಂಡನ್ : ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (58) ಅವರು ಗುರುವಾರ ತಮ್ಮ ಆಡಳಿತ ಪಕ್ಷ ಕನ್ಸರ್‌ವೇಟಿವ್ (ಟೋರಿ) ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಆದರೆ, ಹೊಸ ನಾಯಕನ ಆಯ್ಕೆಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.ಅಕ್ಟೋಬರ್‌ನಲ್ಲಿ ನಿಗದಿಯಂತೆ ನಡೆಯಲಿರುವ ಕನ್ಸರ್‌ವೇಟಿವ್ ಪಕ್ಷದ ಅಧಿವೇಶನದಲ್ಲಿ ಸಂಸದರು, ಹೊಸ ಪ್ರಧಾನಿ ಮತ್ತು ನಾಯಕನ ಹೆಸರನ್ನು ಘೋಷಿಸಲಿದ್ದಾರೆ.
ಪಾರ್ಟಿ ಗೇಟ್ ಮತ್ತು ಹಲವು ಅಕ್ರಮಗಳ ಹಗರಣಗಳಿಂದ ದೇಶದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಬೋರಿಸ್, ಕಳೆದ ತಿಂಗಳಷ್ಟೇ ಎದುರಾದ ಅವಿಶ್ವಾಸ ನಿಲುವಳಿಯಲ್ಲಿ ಪ್ರಯಾಸದಲ್ಲಿ ವಿಶ್ವಾಸಮತ ಗೆದ್ದು ಅಧಿಕಾರ ಉಳಿಸಿಕೊಂಡಿದ್ದರು.ಪಕ್ಷದ ಸಂಸದರೇ ಬೋರಿಸ್ ವಿರುದ್ಧ ಬಂಡಾಯ ಸಾರಿದ್ದರಿಂದ ಈ ಬೆಳವಣಿಗೆ ನಡೆದಿತ್ತು.
ಕಳೆದ ಎರಡು ದಿನಗಳಿಂದ ತಮ್ಮ ಸಂಪುಟದ ಹಿರಿಯ ಮತ್ತು ಕಿರಿಯ ಸಚಿವರು ಸಾಮೂಹಿಕ ರಾಜೀನಾಮೆ ನೀಡಿ, ಸರ್ಕಾರದಿಂದ ಹೊರ ನಡೆದ ನಂತರ ಬೋರಿಸ್ ಅವರ ನಾಯಕತ್ವದ ಭವಿಷ್ಯ ತೂಗೂಯ್ಯಾಲೆಯಲ್ಲಿತ್ತು.
ಹಣಕಾಸು ಸಚಿವ ರಿಷಿ ಸುನಕ್ ಸಹಿತ ಹಿರಿಯ ಮತ್ತು ಕಿರಿಯ ಸಚಿವರು ಸೇರಿ 13 ಸಚಿವರು ರಾಜೀನಾಮೆ ನೀಡಿ, ಬೋರಿಸ್ ನಾಯಕತ್ವದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದರು. ಪಕ್ಷದ ಒಳಗೆ ಮತ್ತು ಹೊರಗಿನ ಒತ್ತಡದ ನಡುವೆಯೂ ಯಾವುದೇ ಕಾರಣಕ್ಕೆ ರಾಜೀನಾಮೆ ಸಲ್ಲಿಸುವುದಿಲ್ಲವೆಂದು ಬೋರಿಸ್ ಬುಧವಾರದವರೆಗೂ ಪಟ್ಟುಹಿಡಿದಿದ್ದರು.
ರಾಜೀನಾಮೆ ಸಲ್ಲಿಸಿದ ನಂತರ ಪ್ರಧಾನಿಯ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್ ಹೊರೆಗೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಬೋರಿಸ್, ‘ವಿಶ್ವದಲ್ಲೇ ಅತ್ಯುತ್ತಮವಾದ ಹುದ್ದೆಯನ್ನು ತೊರೆಯಲು ದುಃಖಿತನಾಗಿದ್ದೇನೆ. ಇದು ನಿಮಗೆ ತಿಳಿಯಲೆಂದು ಬಯಸುವೆ. ನನಗೆ ಸಾಕಷ್ಟು ಅವಕಾಶವನ್ನು ನೀಡಿದ್ದೀರಿ. ರಾಜಕಾರಣದಲ್ಲಿ ಯಾರೂ ಅನಿವಾರ್ಯವಲ್ಲ, ಹೊಸ ನಾಯಕನಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ’ ಎಂದು ಹೇಳಿದರು.
ದೇಶಕ್ಕೆ ಒಳ್ಳೆ ಸುದ್ದಿ:ಬೋರಿಸ್ ರಾಜೀನಾಮೆ ನಿರ್ಧಾರ ಹೊರ ಬೀಳುತ್ತಿದ್ದಂತೆ ವಿರೋಧ ಪಕ್ಷಗಳು ಹಾಗೂ ವಿವಿಧ ವಲಯಗಳ ನಾಯಕರು ಸಂಭ್ರಮಿಸಿದ್ದಾರೆ. ‘ಇದು ದೇಶಕ್ಕೆ ಶುಭ ಸುದ್ದಿ’ ಎಂದು ವಿರೋಧಪಕ್ಷವಾದ ಲೇಬರ್ ಪಾರ್ಟಿ ಪ್ರತಿಕ್ರಿಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.