ಉತ್ತರಕ್ಯಾಲಿಫೋರ್ನಿಯಾದಲ್ಲಿ ಕಳೆದ ವಾರ ಹತ್ತಿಕೊಂಡ ಕಾಳ್ಗಿಚ್ಚಿನಿಂದ ಈವರೆಗೆ ಸಾವಿಗೀಡಾದವರ ಸಂಖ್ಯೆ 12. 20,000ಕ್ಕಿಂತಲೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಕಾಶ ಕೇಸರಿ ಬಣ್ಣದಿಂದ ಆವೃತವಾಗಿದೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಲೇ ಇದೆ. ಕ್ಯಾಲಿಫೋರ್ನಿಯಾದಲ್ಲಿ ಈ ವರ್ಷ ಕಾಳ್ಗಿಚ್ಚಿನಿಂದಾಗಿ ಸುಮಾರು 20 ಲಕ್ಷ ಎಕರೆ ಅರಣ್ಯ ನಾಶವಾಗಿದೆ.
ಅಂದಹಾಗೆ ವಾರದ ಹಿಂದೆಎಲ್‌ಡರಾಡೊ ಕಾಳ್ಗಿಚ್ಚಿಗೆ ಕಾರಣವಾಗಿದ್ದು ಜೆಂಡರ್ ರಿವೀಲಿಂಗ್ ಪಾರ್ಟಿ (ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ಆಪ್ತರಿಗೆ ತಿಳಿಸುವ ಕಾರ್ಯಕ್ರಮ). ಕಳೆದ ಶನಿವಾರ ಕ್ಯಾಲಿಫೋರ್ನಿಯಾದ ದಂಪತಿ ಜೆಂಡರ್ ರಿವೀಲಿಂಗ್ ಪಾರ್ಟಿ ವೇಳೆ ಸ್ಫೋಟಿಸಿದ ಬಣ್ಣದ ಸ್ಫೋಟಕದಿಂದ ನಾಶವಾಗಿದ್ದು ಸುಮಾರು 13,592 ಎಕರೆ ಭೂಭಾಗ!.
ಕ್ಯಾಲಿಫೋರ್ನಿಯಾಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯ ಪ್ರಕಾರ ಸ್ಯಾನ್ ಬೆರ್ನಾರ್ಡಿನೊ ನಗರದ ಓಕ್ ಗ್ಲೆನ್ ಬಳಿಯಿರುವ ಎಲ್‌ಡರಾಡೊದಲ್ಲಿನ ಕಾಳ್ಗಿಚ್ಚಿಗೆ ಕಾರಣವಾಗಿದ್ದು ಜೆಂಡರ್ ರಿವೀಲಿಂಗ್ ಪಾರ್ಟಿಯಲ್ಲಿ ಬಳಸಿದ್ದ ಪೈರೊಟೆಕ್ನಿಕ್ (ಬಣ್ಣದ ಹೊಗೆ ಸಿಡಿಸುವ) ಸಾಧನ. ಹೊರಾಂಗಣದಲ್ಲಿ ನಡೆಯುವ ಸಂಭ್ರಮಾಚರಣೆಗಳಲ್ಲಿ ಹೊಗೆ ಮತ್ತು ಕೃತಕ ಪಟಾಕಿ ಸಿಡಿಸುವುದಕ್ಕಾಗಿ ಪೈರೊಟೆಕ್ನಿಕ್ ಸಾಧನವನ್ನು ಬಳಸಲಾಗುತ್ತದೆ.ಈ ಸಾಧನದಲ್ಲಿ ಸೋಡಿಯಂ, ಬೇರಿಯಂ, ಸ್ಟ್ರೋಂಟಿಯಂ, ಕ್ಯಾಲ್ಸಿಯಂ ಮತ್ತು ತಾಮ್ರ ಅಡಕವಾಗಿದ್ದು ಬಿಸಿಯಾದ ಕೂಡಲೇ ಬಣ್ಣದ ಹೊಗೆಯೊಂದಿಗೆ ಪಟಾಕಿಯಂತೆ ಇದು ಸ್ಫೋಟಗೊಳ್ಳುತ್ತದೆ.
ಜೆಂಡರ್ ರಿವೀಲಿಂಗ್ ಪಾರ್ಟಿ ಎಂಬ ಟ್ರೆಂಡ್
ಸೆಪ್ಟೆಂಬರ್ 9ರಂದು ಯುಎಇ ಮೂಲದ ದಂಪತಿಗಳು ಜಗತ್ತಿನ ಅತೀ ದೊಡ್ಡ ಕಟ್ಟಡವಾದ ದುಬೈನ ಬುರ್ಜ್ ಖಲೀಫಾದಲ್ಲಿ ನೀಲಿ ಬಣ್ಣದ ವಿದ್ಯುದ್ದೀಪ ಹೊಳೆಯುವಂತೆ ಮಾಡಿ ತಮಗೆ ಹುಟ್ಟುವ ಮಗುವಿನ ಲಿಂಗ ಘೋಷಣೆ ಮಾಡಿದ್ದರು. ಈ ಜೆಂಡರ್ ರಿವೀಲಿಂಗ್ ಪಾರ್ಟಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಜೆಂಡರ್ ರಿಲೀವಿಂಗ್ ಪಾರ್ಟಿ ಎಂಬುದು ವಿದೇಶ ರಾಷ್ಟ್ರಗಳಲ್ಲಿ ಆರಂಭವಾಗಿದ್ದು ದಶಕಗಳ ಹಿಂದೆ. ವಿನೂತನ ರೀತಿಯಲ್ಲಿ ಮಗುವಿನ ಲಿಂಗ ಘೋಷಣೆ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಮೆಚ್ಚುಗೆ ಗಳಿಸುವ 'ಗೀಳು' ಮಾತ್ರ ಇತ್ತೀಚಿನದ್ದು.ಮಗುವಿನ ನಿರೀಕ್ಷೆಯಲ್ಲಿರುವ ದಂಪತಿ ತಮಗೆ ಹುಟ್ಟಲಿರುವ ಮಗುವಿನ ಲಿಂಗ ಘೋಷಣೆ ಮಾಡುವುದು ನೀಲಿ ಅಥವಾ ಪಿಂಕ್ ಬಣ್ಣವನ್ನು ಪ್ರದರ್ಶಿಸುವ ಮೂಲಕ. ನೀಲಿ ಅಂದರೆ ಗಂಡು, ಪಿಂಕ್ ಆಗಿದ್ದರೆ ಹೆಣ್ಣು!
ನೀಲಿ ಅಥವಾ ಪಿಂಕ್ ಬಲೂನ್‌ಗಳನ್ನು ಬಾಕ್ಸ್‌ನೊಳಗಿರಿಸಿ ತಮ್ಮ ಕುಟುಂಬ-ಸ್ನೇಹಿತರ ಮುಂದೆ ಆ ಬಾಕ್ಸ್ ತೆರೆದು ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಮಗುವಿನ ಲಿಂಗ ಘೋಷಣೆ ಮಾಡುವುದು ವಿದೇಶಗಳಲ್ಲಿ ಸರ್ವೇ ಸಾಮಾನ್ಯ. ಇದಾದನಂತರ ಬಣ್ಣದ ಹೊಗೆ ಸೂಸುವ ಸಾಧನಗಳನ್ನು ಬಳಸಿ ಇಲ್ಲವೇ ಬಣ್ಣದ ಪಟಾಕಿ ಸಿಡಿಸಿ ಲಿಂಗ ಘೋಷಣೆ ಮಾಡುವ ಪರಿಪಾಠ ಆರಂಭವಾಯಿತು. ಹೀಗೊಂದು ಆಚರಣೆ ಆರಂಭವಾಗಿದ್ದು2008ರಲ್ಲಿ. ಜೆನ್ನಾ ಕರ್ವುನಿಡಿಸ್ (Jenna Karvunidis) ಎಂಬ ಬ್ಲಾಗರ್ ಕೇಕ್ ಕತ್ತರಿಸಿ ಜೆಂಡರ್ ರಿವೀಲಿಂಗ್ ಪಾರ್ಟಿ ಮಾಡಿದ್ದರು. ಕೇಕ್‌ನ ಮಧ್ಯೆ ಪಿಂಕ್ ಬಣ್ಣದ ಫ್ರೋಸ್ಟಿಂಗ್ ಇರಿಸಿ ಹುಟ್ಟಲಿರುವ ಮಗು ಹೆಣ್ಣು ಎಂದು ಘೋಷಿಸಿದ್ದರು. ಹೀಗೆ ಶುರುವಾದ ಜೆಂಡರ್ ರಿವೀಲಿಂಗ್ ಪಾರ್ಟಿಗಳು ವರ್ಷ ಕಳೆದಂತೆ 'ವಿಪರೀತ' ಎನಿಸುವಷ್ಟು ಬದಲಾಗಿದೆ.
2019 ಏಪ್ರಿಲ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಕಾರೊಂದನ್ನು ಸ್ಫೋಟಿಸಿ ಅದರಿಂದ ನೀಲಿ ಬಣ್ಣದ ಹೊಗೆ ಬರುವಂತೆ ಮಾಡಿ ಮಗುವಿನ ಲಿಂಗ ಘೋಷಣೆ ಮಾಡಲಾಗಿತ್ತು. ಟೆಕ್ಸಾಸ್‌ನಲ್ಲಿ ಕಳೆದ ವರ್ಷ ಪುಟ್ಟ ವಿಮಾನವೊಂದರಿಂದ 350 ಗ್ಯಾಲನ್ ಪಿಂಕ್ ಬಣ್ಣದ ನೀರನ್ನು ಚೆಲ್ಲುವ ಮೂಲಕ ಲಿಂಗ ಘೋಷಣೆ ಮಾಡಿದ್ದರು. ಆ ವಿಮಾನ ಪತನವಾಗಿದ್ದು ಸುದ್ದಿಯಾಗಿತ್ತು.
ಇನ್ನು ಕೆಲವರು ಜೆಂಡರ್ ರಿವೀಲಿಂಗ್ ಪಾರ್ಟಿಯಲ್ಲಿನ ಎಡವಟ್ಟು ಅಥವಾ ಹುಟ್ಟಲಿರುವ ಮಗುವಿನ ಲಿಂಗ ಘೋಷಣೆ ಮಾಡುವಾಗ ಮಕ್ಕಳ ಪ್ರತಿಕ್ರಿಯೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂಥವಿಡಿಯೊಗಳಿಗೆ ಹೆಚ್ಚಿನ ವೀಕ್ಷಣೆಯೂ ಸಿಗುತ್ತದೆ. ಲೈಕ್, ಶೇರ್‌ಗಳೊಂದಿಗೆ ವೈರಲ್ ಆಗುವ ಇಂತಹ ವಿಡಿಯೊಗಳೇ ಹೆಚ್ಚೆಚ್ಚು ಮಂದಿ ಇಂತಹ ಹುಚ್ಚಾಟ ಮಾಡುವಂತೆ ಪ್ರೇರೇಪಿಸಿದ್ದು.
ಇಂಥ ಪಾರ್ಟಿನಿಲ್ಲಿಸಿ ಎಂದ ಜೆನ್ನಾ
ಕ್ಯಾಲಿಫೋರ್ನಿಯಾ ಕಾಳ್ಗಿಚ್ಚಿಗೆ ಕಿಡಿ ಹತ್ತಲು ಕಾರಣವಾದ ಜೆಂಡರ್ ರಿವೀಲಿಂಗ್ ಪಾರ್ಟಿ ಬಗ್ಗೆ ಪ್ರತಿಕ್ರಿಯಿಸಿದ ಬ್ಲಾಗರ್ ಜೆನ್ನಾ, ಇದೆಲ್ಲ ಅವಿವೇಕದ ಪಾರ್ಟಿಗಳು. 2008ರಲ್ಲಿ ನಾನು ಕೇಕ್ ಕತ್ತರಿಸುವ ಮೂಲಕ ಜೆಂಡರ್ ರಿವೀಲಿಂಗ್ ಪಾರ್ಟಿ ಶುರುಮಾಡಿದೆ ಎಂದ ಮಾತ್ರಕ್ಕೆ ಬೆಂಕಿ ಹಚ್ಚಿ ಜನರ ಪ್ರಾಣಕ್ಕೆ ತೊಂದರೆ ಕೊಡಬಹುದು ಎಂದರ್ಥವಲ್ಲ. ಈ ರೀತಿಯ ಪಾರ್ಟಿ ನಿಲ್ಲಿಸಿ ಎಂದಿದ್ದಾರೆ.
ವಿಷಕಾರಿ ಪುರುಷತ್ವವು ಅಕ್ಷರಶಃ ನಮ್ಮ ಸಮಾಜವನ್ನು ಸುಡುತ್ತಿದೆ. ಅವರು ಪುರುಷತ್ವದ ಪುರುಷರು ಎಂದು ಸಾಬೀತು ಪಡಿಸಲು ಆಕ್ರಮಣಕಾರಿ ರೀತಿಯನ್ನು ಬಿಟ್ಟು ಬೇಬಿ ಪಾರ್ಟಿಯನ್ನು ಆನಂದಿಸಲು ಅವರಿಂದ ಸಾಧ್ಯವಿಲ್ಲವೇ? ಎಂದು ಜೆನ್ನಾ ಟ್ವೀಟಿಸಿದ್ದರು.
ಅನಾಹುತಮೊದಲೇನಲ್ಲ
ಜೆಂಡರ್ ರಿವೀಲಿಂಗ್ ಪಾರ್ಟಿಯಿಂದ ಅರಣ್ಯ ಹೊತ್ತಿ ಉರಿದು ಅನಾಹುತ ಸಂಭವಿಸಿದ್ದು ಇದೇ ಮೊದಲೇನಲ್ಲ. 2017ರಲ್ಲಿ ಅರಿಜೋನಾದಲ್ಲಿ ನಡೆದ ಪಾರ್ಟಿಯಿಂದಾಗಿ ಸುಮಾರು 47,000 ಎಕರೆ ಅರಣ್ಯ ಸುಟ್ಟು ನಾಶವಾಗಿತ್ತು. 8 ಮಿಲಿಯನ್ ಡಾಲರ್ ನಷ್ಟ ಸಂಭವಿಸಿತ್ತು.
2019ರಲ್ಲಿ ಅಮೆರಿಕದ ಮಧ್ಯಪ್ರಾಚ್ಯದಲ್ಲಿನ ಲೋವಾದಲ್ಲಿ ಜೆಂಡರ್ ರಿವೀಲಿಂಗ್ ಪಾರ್ಟಿಯಲ್ಲಿ ಪೈಪ್ ಬಾಂಬ್ ಬಳಸಿ ನಡೆಸಿದ ಸ್ಫೋಟದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. 2018ರಲ್ಲಿ ನೀಲಿ ಬಣ್ಣದ ಜೆಲ್ಲಿ ತುಂಬಿದ ಕಲ್ಲಂಗಡಿ ಹಣ್ಣೊಂದನ್ನು ಸಾಕು ಮೊಸಳೆಯ ಬಾಯಲ್ಲಿರಿಸಿ ವ್ಯಕ್ತಿಯೊಬ್ಬರು ಮಗುವಿನ ಲಿಂಗ ಘೋಷಣೆ ಮಾಡಿದ್ದರು. ಈ ರೀತಿಪ್ರಾಣಿ ದೌರ್ಜನ್ಯ ನಡೆಸಿದ್ದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.
ಅದಾಗ್ಯೂ ಎಲ್‌ಡರಾಡೊ ಕಾಳ್ಗಿಚ್ಚಿಗೆ ಕಾರಣರಾದ ಜೆಂಡರ್ ರಿವೀಲಿಂಗ್ ಪಾರ್ಟಿಯ ಆಯೋಜಕರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಅವರು 911 ಸಂಖ್ಯೆಗೆ ಕರೆ ಮಾಡಿದ್ದರು. ಬೆಂಕಿ ಯುಕೈಪಾ ರಿಡ್ಜ್‌ನತ್ತ ವ್ಯಾಪಿಸಿದ್ದರಿಂದ ಅಲ್ಲಿನ ಸ್ಥಳೀಯರನ್ನು ಸ್ಥಳಾಂತರಿಸಲಾಗಿತ್ತು. ಈ ಬಾರಿ ಕ್ಯಾಲಿಫೋರ್ನಿಯಾದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಇಂಥಾ ಹೊತ್ತಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ್ದು ಬೆಂಕಿ ಹತ್ತಲು ಕಾರಣವಾಯಿತು ಅಂತಾರೆ ಸ್ಥಳೀಯರು.
ಇದೀಗ ಕೊರೊನಾವೈರಸ್ ಪಿಡುಗಿನಿಂದ ಇಡೀ ಜಗತ್ತೇ ತತ್ತರಿಸುತ್ತಿರುವಾಗ ಕ್ಯಾಲಿಫೋರ್ನಿಯಾದ ಕಾಡುಗಳು ಹೊತ್ತಿ ಉರಿಯುತ್ತಿವೆ. ಹುಟ್ಟುವ ಮಗು ಗಂಡು ಎಂದು ನೀಲಿ ಹೊಗೆ ಮೂಲಕ ತಿಳಿಸಲು ಹೋಗಿ ಅರಣ್ಯ ಹೊತ್ತಿ ಉರಿದು ಇಡೀ ನಗರವೇ ದಟ್ಟ ಹೊಗೆಯಿಂದ ಆವೃತವಾಗಿದೆ. ಅರಣ್ಯ ನಾಶದೊಂದಿಗೆ ಬೆಂಕಿಗೆ ಆಹುತಿಯಾದ ಪ್ರಾಣಿ ಸಂಕುಲದ ಲೆಕ್ಕವಿಟ್ಟವರಾರೋ? ಈ ಹೊತ್ತಲ್ಲಿ ಮನುಷ್ಯನ ಒಂದು ಸಣ್ಣ ತಪ್ಪು ಅಥವಾ ನಿರ್ಲಕ್ಷ್ಯದಿಂದ ಸಂಭವಿಸಿದ ಈ ಅನಾಹುತವನ್ನು ಪ್ರಕೃತಿ ವಿಕೋಪ ಎಂದರೆ ತಪ್ಪಾದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.