ಒಟ್ಟಾವಾ: ಕೆನಡಾ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಗಳನ್ನು ಹತ್ಯೆಗೈಯುವ ಸಂಚಿನಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕೆನಡಾ ಆರೋಪಿಸಿದೆ.
ಕೆನಡಾದಲ್ಲಿರುವ ಸಿಖ್ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಕೈಗೊಳ್ಳಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್ ಶಾ ಆದೇಶಿಸಿದ್ದರು ಎಂದು ಕೆನಡಾದ ಸಚಿವರೊಬ್ಬರು ಮಂಗಳವಾರ ಆರೋಪಿಸಿದ್ದಾರೆ.
ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಅವರು, ಸಂಸತ್ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿಗೆ ಈ ವಿಷಯ ತಿಳಿಸಿದ್ದಾರೆ.
‘ಖಚಿತಪಡಿಸಿದ್ದು ನಾನೇ’:
ಈ ವಿಷಯದ ಕುರಿತ ಆರೋಪಗಳ ವರದಿಯನ್ನು ಮೊದಲ ಬಾರಿಗೆ ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿತ್ತು. ‘ಆ ಪತ್ರಿಕೆಯ ವರದಿಗಾರನಿಗೆ ಈ ವಿಷಯವನ್ನು ನಾನೇ ಖಚಿತಪಡಿಸಿದ್ದೆ’ ಎಂದು ಮಾರಿಸನ್ ಹೇಳಿದ್ದಾರೆ.
‘ಪತ್ರಕರ್ತ ನನಗೆ ಕರೆ ಮಾಡಿ, ಅದು ಆ ವ್ಯಕ್ತಿಯೇ (ಅಮಿತ್ ಶಾ) ಎಂದು ಕೇಳಿದರು. ನಾನು, ಹೌದು ಎಂದು ಖಚಿತಪಡಿಸಿದ್ದೆ’ ಎಂದು ಮಾರಿಸನ್ ಸಮಿತಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಮಿತ್ ಶಾ ಅವರ ಒಳಗೊಳ್ಳುವಿಕೆ ಕುರಿತು ಕೆನಡಾಗೆ ಹೇಗೆ ತಿಳಿದಿತ್ತು ಎಂಬುದನ್ನು ಅವರು ತಿಳಿಸಿಲ್ಲ.
ಗೃಹ ಸಚಿವರ ವಿರುದ್ಧದ ಆರೋಪಗಳ ಕುರಿತು ಭಾರತ ಸರ್ಕಾರ ಮತ್ತು ಒಟ್ಟಾವಾದಲ್ಲಿನ ಭಾರತೀಯ ರಾಯಭಾರ ಕಚೇರಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
‘ಅಮಿತ್ ಶಾ ಪಾತ್ರದ ಕುರಿತು ಕೆನಡಾ 2023ರ ಅಕ್ಟೋಬರ್‌ನಲ್ಲಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿತ್ತು. ಆದರೆ, ಅದು ದುರ್ಬಲ ಮಾಹಿತಿಯಾಗಿತ್ತು’ ಎಂದು ಭಾರತ ಸರ್ಕಾರದ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.
2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವರ್ಷದ ಹಿಂದೆ ಪ್ರತಿಪಾದಿಸಿದ್ದರು.
ಇದಕ್ಕೆ ಪೂರಕವಾಗಿ ಪುರಾವೆಗಳನ್ನು ಭಾರತೀಯ ಅಧಿಕಾರಿಗಳ ಜತೆ ಹಂಚಿಕೊಂಡಿರುವುದಾಗಿ ಕೆನಡಾ ಅಧಿಕಾರಿಗಳು ಪದೇ ಪದೇ ಹೇಳಿಕೊಂಡು ಬಂದಿದ್ದಾರೆ. ಆದರೆ ಇದನ್ನು ಭಾರತೀಯ ಅಧಿಕಾರಿಗಳು ನಿರಾಕರಿಸಿಕೊಂಡು ಬಂದಿದ್ದಾರೆ. ಅಲ್ಲದೆ ಈ ಆರೋಪಗಳನ್ನು ಅಸಂಬದ್ಧ ಎಂದೂ ಕರೆದಿದ್ದಾರೆ.
ಪುರಾವೆಯಿದೆ, ಸಹಕಾರ ಸಿಕ್ಕಿಲ್ಲ:
‘ಕೆನಡಾದಲ್ಲಿರುವ ಭಾರತೀಯ ಮೂಲದ ಪ್ರಜೆಗಳ ಬಗ್ಗೆ ಭಾರತ ಸರ್ಕಾರವು ರಾಜತಾಂತ್ರಿಕ ವ್ಯವಸ್ಥೆ ಮತ್ತು ಇತರ ಮೂಲಗಳಿಂದ ಮಾಹಿತಿ ಸಂಗ್ರಹಿಸಿದೆ ಎಂಬುದರ ಪುರಾವೆ ನಮ್ಮ ಬಳಿಯಿದೆ’ ಎಂದು ಟ್ರುಡೊ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ನಥಾಲಿ ಡ್ರೌಯಿನ್ ಮಂಗಳವಾರ ಸಮಿತಿಗೆ ತಿಳಿಸಿದ್ದಾರೆ.
ವ್ಯಾಪಕ ಜಾಲ ಹೊಂದಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡವು ಕೆನಡಾದಲ್ಲಿ ಕೊಲೆ, ಕೊಲೆ ಸಂಚು ಸೇರಿದಂತೆ ಹಿಂಸಾತ್ಮಕ ಅಪರಾಧಗಳಲ್ಲಿ ತೊಡಗಿದೆ. ಈ ತಂಡದವರೊಂದಿಗೆ ಭಾರತೀಯ ಅಧಿಕಾರಿಗಳು ಕೆಲಸ ಮಾಡುತ್ತಿರುವ ಕುರಿತ ಮಾಹಿತಿಯನ್ನು ಭಾರತ ಸರ್ಕಾರಕ್ಕೆ ರವಾನಿಸಿರುವುದಾಗಿ ಅವರು ಹೇಳಿದ್ದಾರೆ.
‘ನಾವು ಸಾಕಷ್ಟು ಮಾಹಿತಿ ನೀಡಿದೆವು. ಭಾರತ ಸರ್ಕಾರದಿಂದ ಕೆನಡಾಗೆ ಸಹಕಾರ ದೊರೆಯುವುದಿಲ್ಲ ಎಂಬುದು ಸ್ಪಷ್ಟವಾದ ಬಳಿಕ, ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ನಿರ್ಧರಿಸಲಾಯಿತು’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.