ಒಟ್ಟಾವಾ: ಕೆನಡಾದಲ್ಲಿರುವ ಹಿಂದೂಗಳು ಭಾರತಕ್ಕೆ ಮರಳಬೇಕೆಂದು ಒತ್ತಾಯಿಸಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಈಚೆಗೆ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಬಗ್ಗೆ ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಪ್ರತಿಕ್ರಿಯಿಸಿದ್ದಾರೆ.
'ನಾವು ಹಿಂದೂಗಳು. ನಮ್ಮ ಅದ್ಭುತ ದೇಶವಾದ ಕೆನಡಾಕ್ಕೆ ಪ್ರಪಂಚದ ಎಲ್ಲಾ ಭಾಗಗಳಿಂದ ಬಂದಿದ್ದೇವೆ. ದಕ್ಷಿಣ ಏಷ್ಯಾದ ಪ್ರತಿಯೊಂದು ದೇಶವನ್ನು ಒಳಗೊಂಡು ಆಫ್ರಿಕಾ, ಕೆರಿಬಿಯನ್ ಮತ್ತು ಪ್ರಪಂಚದ ಅನೇಕ ಭಾಗಗಳಿಂದ ನಾವು ಇಲ್ಲಿಗೆ ಬಂದಿದ್ದೇವೆ. ಕೆನಡಾ ನಮ್ಮದು. ಕೆನಡಾ ನಮ್ಮ ಭೂಮಿ’ ಎಂದು ಹೇಳುವ ಮೂಲಕ ಚಂದ್ರ ಆರ್ಯ ಅವರು ಪ್ರತ್ಯೇಕತಾವಾದಿ ನಾಯಕರ ಬೇಡಿಕೆಗಳನ್ನು ಖಂಡಿಸಿದ್ದಾರೆ.
ಇದೇ ವೇಳೆ ಹಿಂದೂಗಳು ಕೆನಡಾದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದ್ದಾರೆ.
ಕೆನಡಾದ ಎಡ್ಮಂಟನ್ ನಗರದಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ದುಷ್ಕರ್ಮಿಗಳು ಸೋಮವಾರ ಮುಂಜಾನೆ ಹಾನಿಗೊಳಿಸಿದ್ದು, ಗೋಡೆಗಳ ಮೇಲೆ ದ್ವೇಷಪೂರಿತ ಮತ್ತು ಭಾರತ ವಿರೋಧಿ ಬರಹಗಳನ್ನು ಬರೆದಿರುವುದನ್ನು ನಾವು ಖಂಡಿಸುತ್ತೇವೆ. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅವರು ಹೇಳಿದ್ದಾರೆ.
ಹಿಂದೂ-ಕೆನಡಿಯನ್ನರು ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸುದೀರ್ಘ ಇತಿಹಾಸದೊಂದಿಗೆ ಕೆನಡಾದ ಬಹುಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಕೆನಡಾವನ್ನು ಕಲುಷಿತಗೊಳಿಸಬೇಕೆಂಬ ಖಾಲಿಸ್ತಾನಿ ಪ್ರತ್ಯೇಕತಾವಾದಿ ಕನಸು ನನಸಾಗುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.