ADVERTISEMENT

ಬೇಹುಗಾರಿಕೆ ಸಾಧ್ಯತೆ ಆರೋಪ: ಭಾರತವನ್ನು ಸೈಬರ್ ಬೆದರಿಕೆ ಪಟ್ಟಿಗೆ ಸೇರಿಸಿದ ಕೆನಡಾ

ಪಿಟಿಐ
Published 2 ನವೆಂಬರ್ 2024, 15:46 IST
Last Updated 2 ನವೆಂಬರ್ 2024, 15:46 IST
<div class="paragraphs"><p>ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ</p></div>

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ

   

ರಾಯಿಟರ್ಸ್ ಚಿತ್ರ

ಒಟ್ಟಾವ: ಕೆನಡಾ ಸರ್ಕಾರ ಇದೇ ಮೊದಲ ಬಾರಿಗೆ ಭಾರತವನ್ನು ಸೈಬರ್ ಬೆದರಿಕೆ ಪಟ್ಟಿಗೆ ಸೇರಿಸಿದೆ. ತನ್ನ ವಿರುದ್ಧ ಭಾರತದ ಸರ್ಕಾರದ ಪ್ರಾಯೋಜಿತ ಬೇಹುಗಾರಿಕೆ ನಡೆಯಬಹುದು ಎಂದು ಆರೋಪಿಸಿ ಈ ಕ್ರಮ ಕೈಗೊಂಡಿದೆ.

ADVERTISEMENT

ಸದ್ಯ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿರುವುದರ ನಡುವೆ, ಕೆನಡಾದ ರಾಷ್ಟ್ರೀಯ ಸೈಬರ್‌ ಬೆದರಿಕೆ ಮೌಲ್ಯಮಾಪನ (ಎನ್‌ಸಿಟಿಎ) 2025–26 ವರದಿ ಬಿಡುಗಡೆಯಾಗಿದೆ.

ದೇಶದಲ್ಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಎದುರಾಗುವ ಸೈಬರ್‌ ಬೆದರಿಕೆಗಳನ್ನು ದೃಢಪಡಿಸುವ ಈ ವರದಿಯನ್ನು ಕೆನಡಾದ ಸೈಬರ್ ಭದ್ರತೆಯ ತಾಂತ್ರಿಕ ಪ್ರಾಧಿಕಾರವಾಗಿರುವ 'ಸೈಬರ್‌ ಸೆಕ್ಯುರಿಟಿ ಕೇಂದ್ರ' ಅಕ್ಟೋಬರ್ 30 ರಂದು ಬಿಡುಗಡೆ ಮಾಡಿದೆ.

ಅದರಲ್ಲಿ, ಚೀನಾ, ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ನಂತರದ ಸ್ಥಾನದಲ್ಲಿ ಭಾರತವನ್ನು ಹೆಸರಿಸಲಾಗಿದೆ.

'ಬೇಹುಗಾರಿಕೆ ಉದ್ದೇಶದಿಂದ ಭಾರತ ಪ್ರಾಯೋಜಿತ ವ್ಯಕ್ತಿಗಳು ಕೆನಡಾ ಸರ್ಕಾರದ ನೆಟ್‌ವರ್ಕ್‌ಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇದೆ' ಎಂದು ಅಂದಾಜಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.‌

ಅಂದಹಾಗೆ, 2018, 2020 ಮತ್ತು 2023-24ರಲ್ಲಿ ಪ್ರಕಟವಾಗಿದ್ದ ವರದಿಗಳಲ್ಲಿ ಭಾರತದ ಹೆಸರು ಉಲ್ಲೇಖವಾಗಿರಲಿಲ್ಲ. 

2023ರ ಜೂನ್‌ನಲ್ಲಿ ಕೆನಡಾದಲ್ಲಿ ನಡೆದಿರುವ ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರ ಪಾತ್ರದ ಬಗ್ಗೆ ವಿಶ್ವಾಸಾರ್ಹ ಪುರಾವೆಗಳಿವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ವರ್ಷದ ಹಿಂದೆ ಹೇಳಿದ್ದರು.

ಟ್ರುಡೊ ಹೇಳಿಕೆಯನ್ನು ಭಾರತ ಅಲ್ಲಗಳೆದಿದೆಯಾದರೂ, ಉಭಯ ದೇಶಗಳ ಸಂಬಂಧ ಹದಗೆಟ್ಟಿದೆ.

ಏತನ್ಮಧ್ಯೆ, ಸಿಖ್‌ ಪ್ರತ್ಯೇಕತಾವಾದಿಗಳನ್ನು ಹತ್ಯೆಗೈಯುವ ಸಂಚಿನಲ್ಲಿ ಅಮಿತ್‌ ಶಾ ಅವರ ಕೈವಾಡವಿದೆ ಎಂದು ಕೆನಡಾದ ಸಚಿವರೊಬ್ಬರು ಇತ್ತೀಚೆಗೆ ಆರೋಪಿಸಿರುವುದು, ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.