ADVERTISEMENT

ಅಮಿತ್‌ ಶಾ ವಿರುದ್ಧ ಕೆನಡಾ ಆರೋಪ ಕಳವಳಕಾರಿ: ಅಮೆರಿಕ

ಪಿಟಿಐ
Published 31 ಅಕ್ಟೋಬರ್ 2024, 2:42 IST
Last Updated 31 ಅಕ್ಟೋಬರ್ 2024, 2:42 IST
<div class="paragraphs"><p>ಕೇಂದ್ರ ಗೃಹ ಸಚಿವ ಅಮಿತ್‌ ಶಾ  </p></div>

ಕೇಂದ್ರ ಗೃಹ ಸಚಿವ ಅಮಿತ್‌ ಶಾ

   

–ಪಿಟಿಐ ಚಿತ್ರ

ವಾಷಿಂಗ್ಟನ್‌: ಸಿಖ್‌ ಪ್ರತ್ಯೇಕತಾವಾದಿಗಳ ವಿರುದ್ಧ ಸಂಚು ರೂಪಿಸುವಲ್ಲಿ ಭಾರತದ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎನ್ನುವ ಕೆನಡಾ ಸರ್ಕಾರದ ಆರೋಪ ‘ಕಳವಳಕಾರಿ’ ಎಂದು ಅಮೆರಿಕ ‍ಪ್ರತಿಕ್ರಿಯಿಸಿದೆ. ‌

ADVERTISEMENT

‘ಕೆನಡಾ ಸರ್ಕಾರ ಮಾಡಿರುವ ಆರೋಪಗಳು ಕಳವಳಕಾರಿಯಾಗಿವೆ. ಈ ಆರೋಪಗಳ ಬಗ್ಗೆ ಕೆನಡಾ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.

ಕೆನಡಾದಲ್ಲಿರುವ ಸಿಖ್‌ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಕೈಗೊಳ್ಳಲು, ಬೆದರಿಕೆ ಹಾಕಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಅಮಿತ್‌ ಶಾ ಆದೇಶಿಸಿದ್ದರು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್‌ ಮಾರಿಸನ್‌ ಅವರು, ಸಂಸತ್‌ ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಭದ್ರತಾ ಸಮಿತಿಗೆ ಈ ವಿಷಯ ತಿಳಿಸಿದ್ದರು.

ಈ ವಿಷಯದ ಕುರಿತ ಆರೋಪಗಳ ವರದಿಯನ್ನು ಮೊದಲ ಬಾರಿಗೆ ವಾಷಿಂಗ್ಟನ್‌ ಪೋಸ್ಟ್‌ ಪ್ರಕಟಿಸಿತ್ತು. ‘ಆ ಪತ್ರಿಕೆಯ ವರದಿಗಾರನಿಗೆ ಈ ವಿಷಯವನ್ನು ನಾನೇ ಖಚಿತಪಡಿಸಿದ್ದೆ’ ಎಂದು ಮಾರಿಸನ್‌ ಹೇಳಿದ್ದಾರೆ.

‘ಪತ್ರಕರ್ತ ನನಗೆ ಕರೆ ಮಾಡಿ, ಅದು ಆ ವ್ಯಕ್ತಿಯೇ (ಅಮಿತ್‌ ಶಾ) ಎಂದು ಕೇಳಿದರು. ನಾನು, ಹೌದು ಎಂದು ಖಚಿತಪಡಿಸಿದ್ದೆ’ ಎಂದು ಮಾರಿಸನ್‌ ಸಮಿತಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅಮಿತ್‌ ಶಾ ಅವರ ಒಳಗೊಳ್ಳುವಿಕೆ ಕುರಿತು ಕೆನಡಾಗೆ ಹೇಗೆ ತಿಳಿದಿತ್ತು ಎಂಬುದನ್ನು ಅವರು ತಿಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.