ನ್ಯೂಯಾರ್ಕ್/ಟೊರೊಂಟೊ: ಕೆನಡಾ–ಅಮೆರಿಕ ಗಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಭಾರತೀಯರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣ ಕುರಿತು ಕೆನಡಾ ಸರ್ಕಾರ ತನಿಖೆ ಆರಂಭಿಸಿದೆ.
ಟೊರೊಂಟೊದಲ್ಲಿ ಬಂದಿಳಿದ ನಂತರ ಈ ಕುಟುಂಬದ ಸದಸ್ಯರು ಗಡಿಗೆ ಹೇಗೆ ಪ್ರಯಾಣಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಡಿಯಲ್ಲಿ ಅವರು ಎದುರಿಸಿದ ಸಮಸ್ಯೆಗಳೇನು ಹಾಗೂ ತನಿಖೆಗೆ ಪೂರಕವಾದ ಇತರ ಮಾಹಿತಿಯನ್ನು ಹಂಚಿಕೊಳ್ಳುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.
ಅಮೆರಿಕ ಗಡಿಯಿಂದ 12 ಮೀ. ದೂರದಲ್ಲಿರುವ ಮನಿಟೊಬಾದ ಎಮರ್ಸನ್ ಎಂಬಲ್ಲಿ, ಗುಜರಾತಿನವರಾದ ಜಗದೀಶ ಬಲದೇವಭಾಯ್ ಪಟೇಲ್ (39), ವೈಶಾಲಿಬೆನ್ ಜಗದೀಶಕುಮಾರ್ ಪಟೇಲ್ (37), ವಿಹಾಂಗಿ ಜಗದೀಶಕುಮಾರ್ ಪಟೇಲ್ (11) ಹಾಗೂ ಧಾರ್ಮಿಕ ಪಟೇಲ್ (3) ಎಂಬುವವರು ಹಿಮಪಾತದಿಂದಾಗಿ ಹೆಪ್ಪುಗಟ್ಟಿ ಜ.19ರಂದು ಮೃತಪಟ್ಟಿದ್ದರು.
‘ಪಟೇಲ್ ಕುಟುಂಬ ಜ.12ರಂದು ಟೊರೊಂಟೊಗೆ ಬಂದಿತ್ತು. 18ರಂದು ಎಮರ್ಸನ್‌ಗೆ ಪ್ರಯಾಣಿಸಿತ್ತು. ಪ್ರತಿಕೂಲ ಹವಾಮಾನದಿಂದಾಗಿ ನಾಲ್ವರೂ ಮೃತಪಟ್ಟರು’ ಎಂದು ಮನಿಟೊಬಾ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್‌ನ ಅಧಿಕಾರಿ ರಾಬ್ ಹಿಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.