ADVERTISEMENT

ಸಾಮರ್ಥ್ಯ ಕುಂದಿಲ್ಲ, ಇನ್ನಷ್ಟು ದಾಳಿ ನಿಶ್ಚಿತ: ಹಿಜ್ಬುಲ್ಲಾ ಎಚ್ಚರಿಕೆ

ಏಜೆನ್ಸೀಸ್
Published 8 ಅಕ್ಟೋಬರ್ 2024, 15:30 IST
Last Updated 8 ಅಕ್ಟೋಬರ್ 2024, 15:30 IST
<div class="paragraphs"><p>ಲೆಬನಾನ್‌ನಿಂದ ಇಸ್ರೇಲ್‌ಗೆ ಕ್ಷಿಪಣಿ ದಾಳಿ</p></div>

ಲೆಬನಾನ್‌ನಿಂದ ಇಸ್ರೇಲ್‌ಗೆ ಕ್ಷಿಪಣಿ ದಾಳಿ

   

– ರಾಯಿಟರ್ಸ್ ಚಿತ್ರ

ಬೈರೂತ್: ‘ಇಸ್ರೇಲ್‌  ಗುರಿಯಾಗಿಸಿ ರಾಕೆಟ್‌ ದಾಳಿಯನ್ನು ತೀವ್ರಗೊಳಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲಿಯನ್ನರು ಅತಂತ್ರರಾಗಲಿದ್ದಾರೆ‘ ಎಂದು ಹಿಜ್ಬುಲ್ಲಾದ ಹಂಗಾಮಿ ನಾಯಕ ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಹಿಜ್ಬುಲ್ಲಾದ ಸೇನಾ ಸಾಮರ್ಥ್ಯವು ಕುಗ್ಗಿಲ್ಲ, ಇಸ್ರೇಲ್‌ನ ದಾಳಿ ಬಳಿಕವು ಧಕ್ಕೆಯಾಗಿಲ್ಲ. ಎಲ್ಲ ಹಿರಿಯ ಕಮಾಂಡರ್‌ಗಳನ್ನು ಬದಲಿಸಲಾಗಿದೆ’ ಎಂದು ಹಂಗಾಮಿ ನಾಯಕ ಶೇಖ್‌ ನಯೀಮ್‌ ಕಾಸೀಂ ಹೇಳಿದ್ದಾರೆ.

ಇಸ್ರೇಲ್‌ ಸೇನೆಯು ದಾಳಿ ನಡೆಸಿ ಹಿಜ್ಬುಲ್ಲಾದ ಉನ್ನತ ಕಮಾಂಡರ್‌ಗಳ ಹತ್ಯೆ ನಡೆಸಿದ ಕೆಲ ದಿನಗಳ ಹಿಂದೆಯೇ ಈ ಹೇಳಿಕೆ ಹೊರಬಿದ್ದಿದೆ ಇದು, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಸೂಚನೆಯನ್ನೂ ನೀಡಿದೆ.

‘ಇಸ್ರೇಲ್‌ನ ಭೂಸೇನೆಯೂ ಲೆಬನಾನ್‌ನ ಭೂ ಗಡಿಯನ್ನು ನಿರೀಕ್ಷೆಯಂತೆ ಆಕ್ರಮಿಸಲು ಆಗಿಲ್ಲ’ ಎಂದು ಕಾಸೀಂ ಅವರು ಹೇಳಿದ್ದಾರೆ. ಕಳೆದ ವಾರವಷ್ಟೇ ಲೆಬನಾನ್‌ ಭೂಭಾಗದತ್ತ ಮುನ್ನುಗ್ಗುವ ಕಾರ್ಯವನ್ನು ಇಸ್ರೇಲ್‌ ಸೇನೆ ಆರಂಭಿಸಿತ್ತು.

ಗಡಿಯುದ್ಧಕ್ಕೂ ಹಿಜ್ಬುಲ್ಲಾ ಬಂಡುಕೋರರ ಸೇನಾ ಸೌಲಭ್ಯಗಳನ್ನು ಧ್ವಂಸಗೊಳಿಸಿದ್ದು, ಹಿಜ್ಬುಲ್ಲಾದ ನೂರಾರು ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆಯು ಹೇಳಿಕೊಂಡಿತ್ತು.

ಹಿಜ್ಬುಲ್ಲಾ ಸಂಘಟನೆಯು ಈ ಕುರಿತಂತೆ ಪ್ರತಿಕ್ರಿಯೆ ನೀಡಿಲ್ಲ. ಪರಸ್ಪರರ ಪ್ರತಿಪಾದನೆಯನ್ನು ದೃಢಪಡಿಸುವ ಅಥವಾ ನಿರಾಕರಿಸುವ ಹೇಳಿಕೆಗಳು ಬರುತ್ತಿಲ್ಲ.

ಯುದ್ಧಕ್ಕೆ ಅಗತ್ಯ ಮಾರ್ಗದರ್ಶನವನ್ನು ಹಿಜ್ಬುಲ್ಲಾದ ಉನ್ನತ ನಾಯಕರು ನೀಡುತ್ತಿದ್ದಾರೆ. ಎಲ್ಲ ಕಮಾಂಡರ್‌ಗಳನ್ನು ಬದಲಿಸಲಾಗಿದೆ. ಯಾವುದೇ ಹುದ್ದೆ ಖಾಲಿ ಉಳಿದಿಲ್ಲ. ಹತ್ಯೆಗೀಡಾದ ಹಸನ್‌ ನಸ್ರಲ್ಲಾ ಅವರ ಸ್ಥಾನದಲ್ಲಿ ಹೊಸ ನಾಯಕನನ್ನು ಶೀಘ್ರವೇ ಹೆಸರಿಸಲಾಗುವುದು ಎಂದು ಕಾಸೀಂ ಹೇಳಿದ್ದಾರೆ.

‘ಗಾಜಾದಲ್ಲಿ ಕದನ ವಿರಾಮ ಘೋಷಣೆಯಾದರೆ ಮಾತ್ರವೇ ದಾಳಿಯನ್ನು ನಿಲ್ಲಿಸಲಾಗುವುದು. ಹಲವು ತಿಂಗಳಿಂದ ಈ ನಿಟ್ಟಿನಲ್ಲಿ ನಡೆದ ಯತ್ನವನ್ನು ತಡೆಯಲಾಗಿದೆ’ ಎಂದು ಹಿಜ್ಬುಲ್ಲಾ ಬಂಡುಕೋರರ ಸಂಘಟನೆಯು ಸ್ಪಷ್ಟಪಡಿಸಿದೆ.

ಮತ್ತೊಂದೆಡೆ, ಲೆಬನಾನ್ ಭೂಗಡಿ ಆಕ್ರಮಿಸುವ ಕಾರ್ಯಾಚರಣೆ ನಡೆದಿದ್ದು, ನಾಲ್ಕನೇ ತುಕಡಿಯು ಈ ಕಾರ್ಯದಲ್ಲಿ ಭಾಗಿಯಾಗುತ್ತಿದೆ. ಸದ್ಯ, ಗಡಿಗೆ ಹೊಂದಿಕೊಂಡಂತೆ ಕಾರ್ಯಾಚರಣೆ ನಡೆದಿದೆ ಎಂದು ಇಸ್ರೇಲ್‌ ಸೇನೆ ಸ್ಪಷ್ಟಪಡಿಸಿದೆ.

ನಮ್ಮ ಸೇನಾ ಸಾಮರ್ಥ್ಯಕ್ಕೆ ಧಕ್ಕೆಯಾಗಿಲ್ಲ. ನೂರಾರು ರಾಕೆಟ್‌ಗಳು ಡಜನ್‌ಗೂ ಹೆಚ್ಚು ಡ್ರೋನ್‌ ಪ್ರಯೋಗಿಸಲಿದ್ದೇವೆ. ಇಸ್ರೇಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ವಸತಿ ಮತ್ತು ನಗರಗಳು ಪ್ರತಿರೋಧ ಎದುರಿಸಲಿವೆ.
-ಶೇಖ್‌ ನಯೀಮ್‌ ಕಾಸೀಂ ಹಿಜ್ಬುಲ್ಲಾದ ಹಂಗಾಮಿ ನಾಯಕ

ಹಿಜ್ಬುಲ್ಲಾ ಕಮಾಂಡರ್ ಹತ್ಯೆ: ಇಸ್ರೇಲ್ ಪ್ರತಿಪಾದನೆ

ಜೆರುಸಲೇಂ: ಬೈರೂತ್‌ ಮೇಲೆ ನಡೆಸಿದ ದಾಳಿಯಲ್ಲಿ ಹಿಜ್ಬುಲ್ಲಾದ ಹಿರಿಯ ಕಮಾಂಡರ್‌ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ತಿಳಿಸಿದೆ. ಹಿಜ್ಬುಲ್ಲಾ ಸಂಘಟನೆಯು ಈ ಸಂಬಂಧ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಹಿಜ್ಬುಲ್ಲಾದ ಆಯವ್ಯಯ ಮತ್ತು ನಾಯಕರ ಪ್ರಯಾಣ ನಿರ್ವಹಣೆಯ ಉಸ್ತುವಾರಿ ಕಮಾಂಡರ್ ಸುಹೇಲ್‌  ಹುಸೇನ್‌ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ಸೇನೆಯು ಹೇಳಿಕೊಂಡಿದೆ. ಪ್ರತಿಯಾಗಿ ಲೆಬನಾನ್‌ ಕಡೆಯಿಂದಲೂ ಇಸ್ರೇಲ್‌ನ ಉತ್ತರ ಭಾಗವನ್ನು ಗುರಿಯಾಗಿಸಿ 85ಕ್ಕೂ ಹೆಚ್ಚು ರಾಕೆಟ್‌ ದಾಳಿ ನಡೆದಿದೆ. ಹೆಚ್ಚಿನವನ್ನು ಹೊಡೆದುರುಳಿಸಿದೆ.

70 ವರ್ಷದ ಮಹಿಳೆಗೆ ಕಡಲತೀರದ ಹೈಫಾದಲ್ಲಿ ಕೆಲವು ಕಟ್ಟಡಳಿಗೆ ಅಲ್ಪ ಹಾನಿಯಾಗಿದೆ ಎಂದು ಸೇನೆಯು ತಿಳಿಸಿದೆ. ಲೆಬನಾನ್‌ನ ದಾಹಿಯ್‌ ನಗರದಲ್ಲಿ ಹಿಜ್ಬುಲ್ಲಾದ ಮುಖ್ಯಕಚೇರಿ ಒಳಗೊಂಡಂತೆ ಅದರ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.  ಅಲ್ಲದೆ ಗಾಜಾ‍ಪಟ್ಟಿಯಿಂದಲೂ ಹಮಾಸ್‌ ಬಂಡುಕೋರರು ಹಲವು ರಾಕೆಟ್‌ಗಳನ್ನು ಸೋಮವಾರ ಇಸ್ರೇಲ್‌ನತ್ತ ಪ್ರಯೋಗಿಸಿದ್ದಾರೆ ಎಂದು ಸೇನೆಯು ತಿಳಿಸಿದೆ. ಈ ಬಗ್ಗೆ ಹೆಚ್ಚಿನ ವಿವರ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.