ನ್ಯೂಯಾರ್ಕ್: ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ದಾಖಲಾಗಿದೆ. 1900ರಿಂದ ಇಲ್ಲಿಯವರೆಗೆ, ಈ ಅನಿಲ ಹೊರಸೂಸುವಿಕೆ ಪ್ರಮಾಣವನ್ನು ಪರಿಗಣಿಸಿದಲ್ಲಿ, ಕಳೆದ ವರ್ಷ ಗರಿಷ್ಠ ಮಟ್ಟದ ಹೊರಸೂಸುವಿಕೆ ದಾಖಲಾಗಿರುವುದು ಕಂಡುಬಂದಿದೆ ಎಂದು ಅಧ್ಯಯನ ಹೇಳಿದೆ.
ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಗುರುವಾರ ಪ್ರಕಟಿಸಿರುವ ವರದಿಯಲ್ಲಿ ಈ ಅಂಶವನ್ನು ವಿವರಿಸಲಾಗಿದೆ.
ಕೋವಿಡ್–19 ಪಿಡುಗು ಕೊನೆಗೊಂಡ ನಂತರ ಎಲ್ಲ ದೇಶಗಳ ಜನಜೀವನ ಸಹಜಸ್ಥಿತಿಗೆ ಮರಳಿತು. ವಿಶೇಷವಾಗಿ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂತು. ವಿಶ್ವದ ಅನೇಕ ನಗರಗಳಲ್ಲಿ ಕಲ್ಲಿದ್ದಲನ್ನು ಕಡಿಮೆ ವೆಚ್ಚದ ಇಂಧನವಾಗಿ ಬಳಸುವುದು ಹೆಚ್ಚಾಗಿದೆ. ಈ ಅಂಶಗಳು ಇಂಗಾಲದ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸೇರುವುದಕ್ಕೆ ಕಾರಣವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳನ್ನು ದಹಿಸಿದಾಗ ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಅನಿಲ ಪರಿಸರವನ್ನು ಸೇರಿ, ವಾತಾವರಣದ ತಾಪಮಾನ ಹೆಚ್ಚುವಂತೆ ಮಾಡುತ್ತದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.