ಬಾಲ್ಟಿಮೋರ್: ಸರಕು ಸಾಗಣೆ ಹಡಗೊಂದು ಅಪ್ಪಳಿಸಿದ ಕಾರಣ ಅಮೆರಿಕದ ಬಾಲ್ಟಿಮೋರ್‌ನ ಪ್ರಮುಖ ಸೇತುವೆಯೊಂದು ಕುಸಿದಿದೆ. ಮಂಗಳವಾರ ನಸುಕಿನಲ್ಲಿ ನಡೆದ ಈ ಅವಘಡದಿಂದಾಗಿ ಹಲವು ವಾಹನಗಳು ನದಿಗೆ ಉರುಳಿವೆ. ಸುಮಾರು ಏಳು ಮಂದಿ ನೀರಿನಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್ಟಿಮೋರ್‌ನಿಂದ ಶ್ರೀಲಂಕಾಕ್ಕೆ ಹೊರಟಿದ್ದ, ಸಿಂಗಪುರ ಧ್ವಜ ಹೊತ್ತಿದ್ದ ‘ಡಾಲಿ’ ಎಂಬ ಹೆಸರಿನ ಹಡಗು ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆಯ ಒಂದು ಆಧಾರಸ್ತಂಭಕ್ಕೆ ಡಿಕ್ಕಿ ಹೊಡೆಯಿತು. ಕ್ಷಣಮಾತ್ರದಲ್ಲಿ ಸೇತುವೆ ಕುಸಿದುಬಿದ್ದಿತು. ಆ ಬಳಿಕ ಹಡಗಿಗೆ ಬೆಂಕಿ ಹೊತ್ತಿಕೊಂಡಿತು. ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಲಾಗಿದೆ.
‘ಸರಕು ಸಾಗಣೆ ಹಡಗು ಸೇತುವೆಗೆ ಅಪ್ಪಳಿಸಿದ ಸುದ್ದಿ ನಸುಕಿನಲ್ಲಿ ವರದಿಯಾಯಿತು. ಆ ವೇಳೆ ಹಲವಾರು ವಾಹನಗಳು ಸೇತುವೆ ಮೇಲಿದ್ದವು. ನದಿಯಿಂದ ಸದ್ಯಕ್ಕೆ ಇಬ್ಬರನ್ನು ಹೊರತೆಗೆದಿದ್ದೇವೆ. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ’ ಎಂದು ಬಾಲ್ಟಿಮೋರ್ ಅಗ್ನಿಶಾಮಕ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
‘ಕಾಣೆಯಾಗಿರುವ ಇತರರಿಗಾಗಿ ಶೋಧ ನಡೆಸಲಾಗುತ್ತಿದೆ. ಆದರೆ, ಈ ರೀತಿಯ ದುರಂತಗಳು ಸಂಭವಿಸಿದಾಗ ಹೆಚ್ಚಿನ ಸಂಖ್ಯೆಯಲ್ಲಿ ಸಾವು–ನೋವು ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಷ್ಟು ಜನರು ನೀರಿನಲ್ಲಿ ಮುಳುಗಿದ್ದಾರೆ ಎಂದು ಈಗಲೇ ಖಚಿತವಾಗಿ ಹೇಳುವುದು ಕಷ್ಟ. ಜನರನ್ನು ರಕ್ಷಿಸುವುದು ಮತ್ತು ಅವರು ಚೇತರಿಸಿಕೊಳ್ಳುವಂತೆ ಮಾಡುವುದರ ಕಡೆಗೆ ಈಗ ನಾವು ದೃಷ್ಟಿ ನೆಟ್ಟಿದ್ದೇವೆ. ಇದೊಂದು ಘೋರ ವಿಪತ್ತು’ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ದುರಂತ ಸಂಭವಿಸಿದ ವೇಳೆ ನದಿಯಲ್ಲಿಯ ಉಷ್ಣಾಂಶವು 8 ಡಿಗ್ರಿ ಸೆಲ್ಸಿಯಸ್ ಇತ್ತು ಎನ್ನಲಾಗಿದೆ.
ಈ ಸೇತುವೆ ಕಡೆಗೆ ಸಾಗುವ ಎಲ್ಲಾ ಮಾರ್ಗಗಳಲ್ಲೂ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಲ್ಲಿಯ ಸಂಚಾರ ವಿಭಾಗವು ‘ಎಕ್ಸ್’ನಲ್ಲಿ ಬೆಳಿಗ್ಗೆಯೇ ಪೋಸ್ಟ್ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.