ಕೊಲಂಬೊ: ಶ್ರೀಲಂಕಾದ ಕಡಲ ತೀರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ 'ಎಕ್ಸ್‌ಪ್ರೆಸ್ ಪರ್ಲ್' ಎಂಬ ಹೆಸರಿನ ಸಿಂಗಪುರದ ಸರಕು ಸಾಗಣೆ ಹಡಗು ಮುಳುಗುತ್ತಿದೆ. ಜೊತೆಗೆ, ಒಡೆದು ಹೋಳಾಗುವ ಭೀತಿ ಎದುರಾಗಿದೆ. ಅದರಿಂದ ಹೊರಚೆಲ್ಲುವ ಅಪಾರ ಪ್ರಮಾಣದ ತೈಲವು ತೀರ ಪ್ರದೇಶದಲ್ಲಿ ಭಾರಿ ಮಾಲಿನ್ಯ ಸೃಷ್ಟಿ ಮಾಡುವ ಸಾಧ್ಯತೆಗಳಿವೆ.
ಇನ್ನೊಂದೆಡೆ ಕಡಲ ತೀರದಲ್ಲಿ ಸೃಷ್ಟಿಯಾಗುವ ಮಾಲಿನ್ಯವನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.
ಕೊಲಂಬೊದಿಂದ ಮರಾವಿಲಾವರೆಗಿನ ಕಡಲ ತೀರಕ್ಕೆ ಹಡಗಿನಿಂದ ಬರುವ ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುವುದು ಎಂದು ರಾಷ್ಟ್ರೀಯ ಜಲಸಂಪನ್ಮೂಲ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ನಾರಾ) ತಿಳಿಸಿದೆ.
ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ಈಗಾಗಲೇ ನಿಯಂತ್ರಣ ಮೀರಿ ವ್ಯಾಪಿಸಿದೆ. ಒಂದು ಹಡಗು ಉರಿಯುತ್ತಲೇ ಇದೆ. ಇದರ ಬೆಂಕಿ ನಂದಿಸಲು ಭಾರತವು ಶ್ರೀಲಂಕಾಕ್ಕೆ ನೆರವಿನ ಹಸ್ತ ಚಾಚಿದೆ. ಭಾರತೀಯ ಕರಾವಳಿ ಕಾವಲು ಪಡೆಯ ಮೂರು ಹಡಗು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಶ್ರೀಲಂಕಾದ ನೌಕಾಪಡೆಯ ಹಡಗು ಮತ್ತು ನಾಲ್ಕು ಖಾಸಗಿ ಟಗ್‌ಗಳೂ ಉರಿಯುತ್ತಿರುವ ಹಡಗಿನ ಮೇಲೆ ನೀರು ಸುರಿಸುತ್ತಿವೆ. ಮಿಲಿಟರಿ ಹೆಲಿಕಾಪ್ಟರ್‌ನಿಂದ ಅಗ್ನಿನಂದಕ ರಾಸಾಯನಿಕಗಳನ್ನು ಹಾಕಲಾಗುತ್ತಿದೆ.
ಈ ಹಡಗಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಟ್ಯಾಂಕ್‌ಗಳು ಮತ್ತು ನೈಟ್ರಿಕ್ ಆ್ಯಸಿಡ್‌ನ 1,486 ಕಂಟೇನರ್‌ಗಳಿವೆ.
186 ಮೀಟರ್ (610 ಅಡಿ) ಉದ್ದದ ಹಡಗನ್ನು ಬೆಂಕಿ ತೀರಾ ದುರ್ಬಲಗೊಳಿಸಿದೆ. ಅದು ಒಡೆದು ತೈಲ ಹೊರಚೆಲ್ಲಲಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.