ದುಬೈ: ಪರಿಸರಕ್ಕೆ ಇಂಗಾಲ ಹೊರಸೂಸುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಪರಿಸರ ಪೂರಕ ಸುಸ್ಥಿರ ಇಂಧನವನ್ನು ಬಳಸಿ ಎಮಿರೇಟ್ಸ್‌ನ ಬೋಯಿಂಗ್ 777 ವಿಮಾನವನ್ನು ಸೋಮವಾರ ಒಂದು ಗಂಟೆ ಕಾಲ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು.
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಇಕೆ 2646, ಯಶಸ್ವಿಯಾಗಿ ತನ್ನ ಯಾನ ಕೊನೆಗೊಳಿಸಿತು. ಬೋಯಿಂಗ್‌ನ ಎರಡು ಜನರಲ್ ಎಲೆಕ್ಟ್ರಿಕ್ ಎಂಜಿನ್‌ಗಳಲ್ಲಿ ಒಂದಕ್ಕೆ ಈ ಇಂಧನವನ್ನು ಬಳಸಿ ಚಲಾಯಿಸಲಾಯಿತು. ಇನ್ನೊಂದು ಎಂಜಿನ್‌ಗೆ ಸುರಕ್ಷತೆಗಾಗಿ ಸಾಂಪ್ರದಾಯಿಕ ಜೆಟ್ ಇಂಧನ ತುಂಬಿಸಲಾಗಿತ್ತು.
‘ಈ ಹಾರಾಟವು ಎಮಿರೇಟ್ಸ್‌ಗೆ ಒಂದು ಮೈಲಿಗಲ್ಲು ಮತ್ತು ನಮ್ಮ ಉದ್ಯಮಕ್ಕೆ ಸಕಾರಾತ್ಮಕ ಹೆಜ್ಜೆಯಾಗಿದೆ. ದೊಡ್ಡ ಸವಾಲುಗಳಲ್ಲಿ ಒಂದಾದ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಎಮಿರೇಟ್ಸ್‌ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಡೆಲ್ ಅಲ್-ರೆಧಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.