ವಾಷಿಂಗ್ಟನ್: ಅಮೆರಿಕದ ಸುಮಾರು 40 ಪ್ರಮುಖ ಕಂಪನಿಗಳ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು (ಸಿಇಒ) ಕೋವಿಡ್ ವಿರುದ್ಧದಭಾರತದ ಹೋರಾಟಕ್ಕೆ ನೆರವಾಗಲು ಮುಂದಾಗಿದ್ದು, ಈ ಸಂಬಂಧ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಜಾಗತಿಕ ಕಾರ್ಯಪಡೆ ರಚಿಸಿದ್ದಾರೆ.
ಅಮೆರಿಕದ ವಾಣಿಜ್ಯ ಮಂಡಳಿಯ ‘ಅಮೆರಿಕ–ಇಂಡಿಯಾ ಬಿಸಿನೆಸ್ ಕೌನ್ಸಿಲ್’ ಮತ್ತು ಅಮೆರಿಕ–ಇಂಡಿಯಾ ಸ್ಟ್ರಾಟಜಿಕ್ ಅಂಡ್ ಪಾರ್ಟನರ್‌ಶಿಪ್ ಒಕ್ಕೂಟ ಮತ್ತು ಬಿಸಿನೆಸ್ ರೌಂಡ್ ಟೇಬಲ್ ಸಂಘಟಿತ ಪ್ರಯತ್ನದೊಂದಿಗೆ ಈ ಜಾಗತಿಕ ಕಾರ್ಯಪಡೆ ರಚಿಸಲು ನಿರ್ಧರಿಸಲಾಯಿತು.
‘ಮುಂದಿನ ದಿನಗಳಲ್ಲಿ ಕಾರ್ಯಪಡೆಯ ಮೂಲಕ 20 ಸಾವಿರ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ಭಾರತಕ್ಕೆ ಕಳುಹಿಸಲುಈ ಕಂಪನಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಡೆಲಾಯ್ಟ್ ಸಿಇಒ ಪುನೀತ್ ರಂಜನ್ ತಿಳಿಸಿದರು.
ಭಾರತದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಅಗತ್ಯವಾದ ಲಸಿಕೆ, ಆಮ್ಲಜನಕ ಮತ್ತು ಇತರೆ ಜೀವರಕ್ಷಕ ಪರಿಕರಗಳ ನೆರವು ಒದಗಿಸುವುದು ಈ ಜಾಗತಿಕ ಕಾರ್ಯಪಡೆಯ ಉದ್ದೇಶ. ಈ ಕಾರ್ಯಪಡೆಗೆ ‘ಗ್ಲೋಬಲ್ ಟಾಸ್ಕ್ ಫೋರ್ಸ್ ಆನ್ ಪ್ಯಾಂಡಮಿಕ್ ರೆಸ್ಪಾನ್ಸ್; ಮೊಬಲೈಜಿಂಗ್ ಫಾರ್ ಇಂಡಿಯಾ‘ ಎಂದು ಹೆಸರಿಡಲಾಗಿದೆ.
ಮತ್ತೊಂದು ದೇಶದಲ್ಲಿ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಇಂಥ ಜಾಗತಿಕ ಕಾರ್ಯಪಡೆ ಆರಂಭವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.