ಸೆಟಿಂಜ್: ಅಮೆರಿಕದ ಮಾಂಟೆನಿಗ್ರೊದ ಸೆಟಿಂಜ್‌ನಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳು ಮತ್ತು ಅವರ ತಾಯಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಬಳಿಕ ದಾರಿಯಲ್ಲಿ ಎದುರಾದ 13 ಮಂದಿ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ. ಈ ಪೈಕಿ ಏಳು ಮಂದಿ ಮೃತಪಟ್ಟಿದ್ದಾರೆ. ಈ ದಾಳಿಕೋರನನ್ನು ದಾರಿಹೋಕನೊಬ್ಬ ಹತ್ಯೆ ಮಾಡಿದ್ದಾನೆ.
ಮಾಂಟೆನಿಗ್ರೊದ ಪೊಲೀಸ್ ಮುಖ್ಯಸ್ಥ ಜೊರಾನ್ ಬ್ರಡ್‌ಜನಿನ್ ಅವರು ಘಟನೆಗೆ ಸಂಬಂಧಿಸಿದ ವಿಡಿಯೊ ವರದಿಯನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡಿದ್ದು, ದಾಳಿಕೋರ 34 ವರ್ಷದವನಾಗಿದ್ದಾನೆ. ಕೇವಲ ವಿಬಿ ಎಂಬ ಇಂಗ್ಲಿಷ್‌ನ ಎರಡಕ್ಷರದ ಇನಿಷಿಯಲ್‌ನಿಂದ ಆತನನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಬೇಟೆಯಾಡುವ ರೈಫಲ್‌ಅನ್ನು ಬಳಕೆ ಮಾಡಲಾಗಿದೆ. ಮೊದಲು ಸೆಟಿಂಜ್‌ನ ಮೆಡೊವಿನಾದಲ್ಲಿ 8 ಮತ್ತು 11 ವರ್ಷದ ಇಬ್ಬರು ಮಕ್ಕಳು ಹಾಗೂ ಅವರ ತಾಯಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಮೃತರು ದಾಳಿಕೋರನ ನೆರೆ ಮನೆಯಲ್ಲಿ ಬಾಡಿಗೆದಾರರಾಗಿ ನೆಲೆಸಿದ್ದರು ಎಂದು ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.
ಮೂವರ ಹತ್ಯೆ ಬಳಿಕ ಬೀದಿಗಿಳಿದ ದಾಳಿಕೋರ ಎದುರಲ್ಲಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. 13ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆದಿದೆ. ಈ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.
ದಾಳಿಕೋರ ವಿಬಿಯನ್ನು ದಾರಿಹೋಕನೊಬ್ಬ ಹತ್ಯೆ ಮಾಡಿದ್ದಾನೆ. ಗಾಯಗೊಂಡವರಲ್ಲಿ ಪೊಲೀಸ್ ಅಧಿಕಾರಿ ಸೇರಿದ್ದಾರೆ ಎಂದು ಪ್ರಾಸಿಕ್ಯೂಟರ್ ಆ್ಯಂಡ್ರಿಜೆನ ನಾಸ್ಟಿಕ್ ತಿಳಿಸಿದ್ದಾರೆ.
ಅಲ್ಲಿನ ಪ್ರಧಾನಿ ಡ್ರಿಟನ್ ಅಬಾಜೊವಿಕ್ ಘಟನೆಗೆ ಸಂಬಂಧಿಸಿ ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.