ಢಾಕಾ: ತೀವ್ರಗೊಂಡ ಗಲಭೆ, ಹಿಂಸಾಚಾರದಿಂದಾಗಿ ಬಾಂಗ್ಲಾದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದ್ದು, ಸಂಚಾರ ವ್ಯವಸ್ಥೆ ನಿಯಂತ್ರಣ ಸವಾಲಾಗಿ ಪರಿಣಮಿಸಿದೆ. ಹೆಚ್ಚಿನ ಸಂಖ್ಯೆಯ ಪೊಲೀಸರು ಕರ್ತವ್ಯ ನಿರ್ವಹಿಸಲು ಹಿಂಜರಿದಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸೋಮವಾರ ದೇಶ ತೊರೆದ ಬಳಿಕ, ದೇಶದಾದ್ಯಂತ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಉದ್ರಿಕ್ತರ ಗುಂಪುಗಳು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದವು. ಈ ವೇಳೆ ಹಲವು ಪೊಲೀಸರು ಮೃತಪಟ್ಟಿದ್ದರು. ಇದರಿಂದಾಗಿ ಪೊಲೀಸರು ಕರ್ತವ್ಯಕ್ಕೆ ಹಾಜರಾಗಲು ಹಿಂಜರಿಯುತ್ತಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ.
‘ರಾಜಧಾನಿ ಢಾಕಾ ಸೇರಿದಂತೆ ದೇಶದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ’ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
400ಕ್ಕೂ ಹೆಚ್ಚು ಠಾಣೆಗಳ ಮೇಲೆ ದಾಳಿ:
‘ದೇಶದಾದ್ಯಂತ 400ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ಮೇಲೆ ಉದ್ರಿಕ್ತರ ಗುಂಪುಗಳು ದಾಳಿ ನಡೆಸಿ ಲೂಟಿ ಮಾಡಿವೆ. ಅಲ್ಲದೆ, ಬೆಂಕಿ ಹಚ್ಚಿ ಠಾಣೆಗಳನ್ನು ಧ್ವಂಸ ಮಾಡಿವೆ. ಇದರಿಂದ ಪೊಲೀಸರು ರಾತ್ರೋರಾತ್ರಿ ಠಾಣೆಗಳನ್ನು ಖಾಲಿ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಢಾಕಾ ಟ್ರಿಬ್ಯೂನ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
‘1971ರಿಂದ ಪೊಲೀಸರು ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪೊಲೀಸ್ ಪ್ರಧಾನ ಕಚೇರಿ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಾಗ, ಹಿರಿಯ ಅಧಿಕಾರಿಗಳನ್ನು ಹೆಲಿಕಾಪ್ಟರ್ ನೆರವಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಅನೇಕರು ಗೋಡೆಗಳನ್ನು ಏರಿ ತಪ್ಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ.
ಉದ್ರಿಕ್ತರ ಗುಂಪು ಸೋಮವಾರ ಜನಪ್ರಿಯ ಜಾನಪದ ಗಾಯನ ತಂಡ ‘ಜೋಲರ್ ಗಾನ್’ದ ಸದಸ್ಯ ರಾಹುಲ್ ಆನಂದ್ ಅವರ ನಿವಾಸದ ಮೇಲೂ ದಾಳಿ ನಡೆಸಿ, ಲೂಟಿ ಮಾಡಿದೆ. ಬಳಿಕ ಬೆಂಕಿಯಿಟ್ಟು ಧ್ವಂಸಗೊಳಿಸಿದೆ. ದಾಳಿಕೋರರು ಮನೆಯಲ್ಲಿದ್ದ ಕನ್ನಡಿ, ಪೀಠೋಪಕರಣಗಳು, ಸಂಗೀತ ವಾದ್ಯಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಅವರ ನಿವಾಸದಲ್ಲಿ 3,000ಕ್ಕೂ ಹೆಚ್ಚು ಸಂಗೀತ ವಾದ್ಯಗಳಿದ್ದವು ಎನ್ನಲಾಗಿದೆ. ದಾಳಿಯ ಬೆನ್ನಲ್ಲೇ ರಾಹುಲ್ ಆನಂದ್ ಮತ್ತು ಅವರ ಕುಟುಂಬವನ್ನು ಗೋಪ್ಯ ಸ್ಥಳದಲ್ಲಿ ರಕ್ಷಿಸಲಾಗಿದೆ.
ಇಂದಿನ ಪ್ರಮುಖ ಬೆಳವಣಿಗೆಗಳು
* ದೇಶದ ರ್‍ಯಾಪಿಡ್ ಆ್ಯಕ್ಷನ್ ಬೆಟಾಲಿಯನ್ (ಆರ್‌ಎಬಿ) ಮತ್ತು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ (ಡಿಎಂಪಿ) ಹುದ್ದೆಗಳಿಗೆ ಹೊಸ ನೇಮಕಗಳನ್ನು ಮಾಡಲಾಗಿದೆ. ಎ.ಕೆ.ಎಂ. ಶಾಹಿದುರ್ ರೆಹಮಾನ್ ಅವರನ್ನು ಆರ್‌ಎಬಿಯ ಮಹಾ ನಿರ್ದೇಶಕರನ್ನಾಗಿ, ಮೈನುಲ್ ಹಸನ್ ಅವರನ್ನು ಡಿಎಂಪಿ ಆಯುಕ್ತರನ್ನಾಗಿ ನೇಮಿಸಲಾಗಿದೆ
* 2020ರ ಅಕ್ಟೋಬರ್‌ನಲ್ಲಿ ನೇಮಕಗೊಂಡಿದ್ದ ಅಟಾರ್ನಿ ಜನರಲ್ ಅಬುಮೊಹಮ್ಮದ್ ಅಮೀನ್ ಉದ್ದೀನ್ ಅವರು ಬುಧವಾರ ರಾಜೀನಾಮೆ ನೀಡಿದ್ದಾರೆ.
* ಬಾಂಗ್ಲಾದೇಶ ಬ್ಯಾಂಕಿನ ನೂರಾರು ಅಧಿಕಾರಿಗಳು ಬ್ಯಾಂಕಿನ ಗವರ್ನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಬ್ಯಾಂಕ್ ಲೂಟಿಕೋರರಿಗೆ ನೆರವಾಗುತ್ತಿದ್ದೀರಾ ಎಂದು ಆರೋಪಿಸಿ, ಡೆಪ್ಯುಟಿ ಗವರ್ನರ್ ಅನ್ನು ಕಚೇರಿಯಿಂದ ಹೋರ ಹೋಗುವಂತೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಡೆಪ್ಯುಟಿ ಗವರ್ನರ್ ಕಾಜಿ ಸಯೀದುರ್ ರೆಹಮಾನ್ ಸೇರಿದಂತೆ ಬ್ಯಾಂಕ್‌ನ ಆರು ಉನ್ನತ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ
* ಪೊಲೀಸರ ಅನುಪಸ್ಥಿತಿಯಲ್ಲಿ ಸತತ ಎರಡನೇ ದಿನವಾದ ಬುಧವಾರವೂ ಬಾಂಗ್ಲಾದೇಶದ ಸ್ಕೌಟ್ಸ್ ಸೇರಿದಂತೆ ವಿದ್ಯಾರ್ಥಿಗಳೇ ಸ್ವಯಂ ಸೇವಕರಾಗಿ ವಿವಿಧೆಡೆ ಸಂಚಾರ ನಿರ್ವಹಣಾ ಕಾರ್ಯವನ್ನು ನಿರ್ವಹಿಸಿದ್ದಾರೆ.
* ಪೊಲೀಸ್ ಪಡೆಯ ಪ್ರತಿಯೊಬ್ಬರೂ ಕರ್ತವ್ಯಕ್ಕೆ ಹಾಜರಾಗಿ, ನಾಗರಿಕರ ಸುರಕ್ಷತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಹೊಸದಾಗಿ ನೇಮಕವಾದ ಪೊಲೀಸ್ ಮಹಾನಿರ್ದೇಶಕ (ಎಐಜಿ) ಎ.ಕೆ.ಎಂ. ಶಾಹಿದುರ್ ರೆಹಮಾನ್ ಕರೆ ನೀಡಿದ್ದಾರೆ.
‘ದೆಹಲಿಯಲ್ಲೇ ಕೆಲ ದಿನ ಇರಲಿರುವ ಹಸೀನಾ’
ದೇಶ ತೊರೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಕೆಲ ದಿನಗಳು ದೆಹಲಿಯಲ್ಲೇ ಇರಲಿದ್ದಾರೆ ಎಂದು ಅವರ ಪುತ್ರ ಸಜೀಬ್ ವಾಝೆದ್ ಜಾಯ್ ಬುಧವಾರ ಪ್ರತಿಕ್ರಿಯಿಸಿದ್ದಾರೆ. ಮೂರನೇ ದೇಶವೊಂದರಲ್ಲಿ ಆಶ್ರಯ ಪಡೆಯುವುದಕ್ಕೆ ಸಂಬಂಧಿಸಿದಂತೆ ಹಸೀನಾ ಅವರ ಮುಂದಿನ ನಡೆ ಕುರಿತು ಜರ್ಮನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ‘ಇವೆಲ್ಲ ವದಂತಿಗಳು. ಆ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕೆಲ ದಿನಗಳು ಅವರು ದೆಹಲಿಯಲ್ಲಿಯೇ ಇರಲಿದ್ದಾರೆ. ಅವರ ತಂಗಿ ಶೇಖ್ ರೆಹನಾ ಅವರೂ ಜತೆಗಿರುವುದರಿಂದ ಅವರು ಒಂಟಿಯಾಗಿಲ್ಲ’ ಎಂದಿದ್ದಾರೆ. ರಾಜಕೀಯಕ್ಕೆ ಸೇರುವ ಯೋಜನೆ ಇದೆಯೇ ಎಂಬ ಪ್ರಶ್ನೆಗೆ ಪ್ರೆತಿಕ್ರಿಯಿಸಿದ ಅವರು ‘ಸದ್ಯ ಅಂತಹ ಯೋಜನೆ ಇಲ್ಲ. ನಮ್ಮ ಕುಟುಂಬದ ವಿರುದ್ಧ ಇದು ಮೂರನೇ ಬಾರಿ ನಡೆದ ದಂಗೆಯಾಗಿದೆ’ ಎಂದಿದ್ದಾರೆ.
ಪ್ರೀತಿ ಶಾಂತಿಯಿಂದ ದೇಶ ಕಟ್ಟೋಣ: ಖಲೀದಾ ಜಿಯಾ
ಗೃಹಬಂಧನದಿಂದ ಬಿಡುಗಡೆಯಾಗಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮುಖ್ಯಸ್ಥೆ ಹಾಗೂ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರು ಬುಧವಾರ ಢಾಕಾದಲ್ಲಿ ಬಿಎನ್‌ಪಿಯ ಬೃಹತ್ ರ್‍ಯಾಲಿಯಲ್ಲಿ ಭಾಷಣ ಮಾಡಿದರು. ಇದು 2018ರ ಬಳಿಕ ಅವರು ಮಾಡಿದ ಮೊದಲ ಸಾರ್ವಜನಿಕ ಭಾಷಣ. ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ‘ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಹೋರಾಟಕ್ಕೆ ಧನ್ಯವಾದಗಳು. ಇದು ಕೋಪ ಅಥವಾ ಸೇಡಲ್ಲ. ಆದರೆ ಪ್ರೀತಿ ಮತ್ತು ಶಾಂತಿ ದೇಶವನ್ನು ಪುನರ್ ನಿರ್ಮಿಸುತ್ತದೆ’ ಎಂದು ಹೇಳಿದರು. ‘ನನ್ನನ್ನು ಜೈಲಿನಿಂದ ಹೊರತರಲು ಹೋರಾಡಿದ ಪ್ರಾರ್ಥಿಸಿದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಅವರು ಹೇಳಿದ್ದಾಗಿ ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.