ಲಾಹೋರ್: ಪಾಕಿಸ್ತಾನ ಪಂಜಾಬ್ ಪ್ರಾಂತ್ಯದ ವಿಧಾನಸಭೆಯಲ್ಲಿ ಇಂದು ಅಲ್ಲೋಲ ಕಲ್ಲೋಲವೇ ನಡೆದಿದ್ದು, ಶಾಸಕರು ಡೆಪ್ಯುಟಿ ಸ್ಪೀಕರ್ ಅವರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯನ್ನು ಚುನಾಯಿಸಲು ವಿಶೇಷ ಸಭೆ ಕರೆಯಲಾಗಿತ್ತು. ಈ ವೇಳೆ ಡೆಪ್ಯುಟಿ ಸ್ಪೀಕರ್ ದೋಸ್ತ್ ಮೊಹಮ್ಮದ್ ಮಜಾರಿ ಪೀಠದಲ್ಲಿದ್ದರು. ಪಾಕಿಸ್ತಾನ್ ಮುಸ್ಲಿಂ ಲೀಗ್ ಅಭ್ಯರ್ಥಿ ಹಮ್ಜಾ ಶಹಭಾಜ್ ಹಾಗೂ ಪಿಟಿಐ ಬೆಂಬಲಿತ ಫರ್ವೇಜ್ ಇಲಾಹಿ ಸಿಎಂ ರೇಸ್‌ನಲ್ಲಿದ್ದರು.
ಮುಸ್ಲಿಂ ಲೀಗ್ ಅಭ್ಯರ್ಥಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಉದ್ರಿಕ್ತರಾದ ಪಿಟಿಐ ಶಾಸಕರು ದೋಸ್ತ್ ಮೊಹಮ್ಮದ್ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಹಲ್ಲೆ ನಡೆಸಿದರು. ಅವರನ್ನು ಕಾಲಿನಿಂದ ಒದ್ದು, ಬಾಗಿಲು ಬಳಿ ದೂಡಿಕೊಂಡು ಹೋದರು.
ತಕ್ಷಣವೇ ಅಲ್ಲಿದ್ದ ಭಧ್ರತಾ ಸಿಬ್ಬಂದಿ ದೋಸ್ತ್ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅಲ್ಲದೇ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಪಂಜಾಬ್ ಅಸೆಂಬ್ಲಿಯಲ್ಲಿ ಪೊಲೀಸರು ಪ್ರವೇಶಿಸಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂದು ವರದಿ ತಿಳಿಸಿದೆ.
ಪಾಕ್ ಪ್ರಧಾನಿ ಶಹಭಾಜ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದಕ್ಕಾಗಿ ಶಾಸಕರು ಒಮ್ಮತದ ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.