ಲಂಡನ್ : ಜಗತ್ತಿನಲ್ಲಿ ಅತಿಹೆಚ್ಚು ಬೇಡಿಕೆ ಹಾಗೂ ಮೌಲ್ಯಯುತ ವಿಸ್ಕಿಗಳಲ್ಲಿ ಒಂದಾಗಿರುವ ‘ದಿ ಮಕಲನ್ ಅದಾಮಿ 1926’ ಹೆಸರಿನ ಸ್ಕಾಚ್ ವಿಸ್ಕಿಯ ಒಂದು ಬಾಟಲಿಯು ₹22.48 ಕೋಟಿ (22 ಲಕ್ಷ ಪೌಂಡ್) ಮೊತ್ತಕ್ಕೆ ಹರಾಜಾಗಿದ್ದು, ಹೊಸ ದಾಖಲೆ ಬರೆದಿದೆ.
ಲಂಡನ್‌ನ ಹೆಸರಾಂತ ಹರಾಜು ಮನೆಯಾದ ಸೋಥೆಬೈಸ್‌ನಲ್ಲಿ ದೂರವಾಣಿ ಮೂಲಕ ಮತ್ತು ಕೊಠಡಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ಈ ಮದ್ಯದ ಬಾಟಲಿ ಖರೀದಿಸಲು ಪೈಪೋಟಿಗೆ ಬಿದ್ದರು. ಇದರ ಲೇಬಲ್‌ಗಳನ್ನು ಇಟಲಿಯ ವರ್ಣಚಿತ್ರಕಾರ ವ್ಯಾಲೆರಿಯೊ ಅಡಾಮಿ ವಿನ್ಯಾಸಗೊಳಿಸಿದ್ದಾರೆ.
ಈ ವಿಸ್ಕಿಯನ್ನು ಬಟ್ಟಿ ಇಳಿಸಿದ್ದು 1926ರಲ್ಲಿ. 1986ರಲ್ಲಿ ಇದನ್ನು ಬಾಟಲಿಯಲ್ಲಿ ಸಂಗ್ರಹಿಸುವುದಕ್ಕೂ ಮೊದಲು ಅರವತ್ತು ವರ್ಷಗಳವರೆಗೆ ಶೆರ್ರಿ ಪೀಪಾಯಿಗಳಲ್ಲಿ ಪಕ್ವಗೊಳಿಸಲಾಗಿತ್ತು. ಕೇವಲ 40 ಬಾಟಲಿಯಷ್ಟು ವಿಸ್ಕಿಯನ್ನಷ್ಟೇ ಉತ್ಪಾದಿಸಲಾಗಿದೆ.
ಇದೇ ಪೀಪಾಯಿಯಿಂದ ಸಂಗ್ರಹಿಸಿದ್ದ ಮತ್ತೊಂದು ಬಾಟಲಿ ವಿಸ್ಕಿಯು 2019ರಲ್ಲಿ ನಡೆದ ಹರಾಜಿನಲ್ಲಿ ₹15.56 ಕೋಟಿಗೆ ಹರಾಜು ಆಗಿತ್ತು.
‘ಈ ವಿಸ್ಕಿಯನ್ನು ಖರೀದಿಸಿ ಮಾರಾಟ ಮಾಡುವುದು ಹಾಗೂ ತಮ್ಮಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಪ್ರತಿಯೊಬ್ಬ ಮದ್ಯ ಹರಾಜುಗಾರನ ಹೆಬ್ಬಯಕೆಯಾಗಿದೆ’ ಎಂದು ಸೋಥೆಬೈಸ್‌ನ ಮುಖ್ಯಸ್ಥ ಜಾನಿ ಫೌಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.