ADVERTISEMENT

40 ದಿನ 4 ಮಕ್ಕಳು; ವಿಮಾನ ಪತನದಲ್ಲಿ ಬದುಕುಳಿದ ಮಕ್ಕಳ ರೋಚಕ ಕಥನ

ಎಪಿ
Published 10 ಜೂನ್ 2023, 3:10 IST
Last Updated 10 ಜೂನ್ 2023, 3:10 IST
ಮಕ್ಕಳೊಂದಿಗೆ ಸೇನಾ‍ಪಡೆ (ಟ್ವಿಟರ್‌ ಚಿತ್ರ)
ಮಕ್ಕಳೊಂದಿಗೆ ಸೇನಾ‍ಪಡೆ (ಟ್ವಿಟರ್‌ ಚಿತ್ರ)   

ಕೊಲಂಬಿಯಾ: ವಿಮಾನ ಪತನವಾದ 40 ದಿನಗಳ ಬಳಿಕ ಒಂದು ವರ್ಷದ ಮಗು ಸೇರಿದಂತೆ ನಾಲ್ಕು ಮಕ್ಕಳನ್ನು ಕೊಲಂಬಿಯಾದ ಅಮೆಜಾನ್‌ ದಟ್ಟಾರಣ್ಯದಿಂದ ಸೇನಾಪಡೆ ಸುರಕ್ಷಿತವಾಗಿ ರಕ್ಷಿಸಿದೆ. ಮಕ್ಕಳೊಂದಿಗೆ ಸೇನಾ ಪಡೆ ತೆಗೆದ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕಾರ್ಯಾಚರಣೆಯೇ ಒಂದು ರೋಚಕ ಕಥನವಾಗಿದೆ. ಮೇ 1ರಂದು ಸೆಸ್ನಾ 206 ವಿಮಾನದಲ್ಲಿ ಯುಟೊಟೊ ಮೂಲದ ಕುಟುಂಬವೊಂದು ಪ್ರಯಾಣಿಸಿತ್ತು. ವಿಮಾನದಲ್ಲಿ ಮಕ್ಕಳ ತಾಯಿ, ತಾಯಿಯ ಸಂಬಂಧಿ, ಮತ್ತು 13, 9, 4 ವರ್ಷದ ಬಾಲಕರು ಮತ್ತು 1 ವರ್ಷದ ಮಗು ಜೊತೆಯಲ್ಲಿದ್ದರು. ಕೊಲಂಬಿಯಾದ ಅಮೆಜಾನ್‌ ದಟ್ಟಾರಣ್ಯದಲ್ಲಿ ವಿಮಾನ ಪತನಗೊಂಡಿದ್ದು, ತಾಯಿ, ತಾಯಿಯ ಸಂಬಂಧಿ ಮತ್ತು ಪೈಲಟ್‌ ಮೃತದೇಹಗಳು ಪತ್ತೆಯಾಗಿದ್ದವು. ಮಕ್ಕಳ ದೇಹಗಳು ಪತ್ತೆಯಾಗದ ಕಾರಣ ಸರ್ಕಾರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.

ಈ ಕಾರ್ಯಾಚರಣೆಯಲ್ಲಿ ಸುಮಾರು 160 ಯೋಧರು ಪಾಲ್ಗೊಂಡಿದ್ದರು. ಅಲ್ಲದೇ ಕಾಡಿನ ಬಗ್ಗೆ ತಿಳಿದ 70 ಮಂದಿ ಸ್ಥಳೀಯರನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು. ಶೋಧ ನಡೆಸಿದ 17 ದಿನಗಳ ಬಳಿಕ ಸೇನೆಗೆ ಕೆಲವು ಕುರುಹುಗಳು ಸಿಕ್ಕಿದ್ದವು. ಮಕ್ಕಳ ಹೆಜ್ಜೆ ಗುರುತುಗಳು, ಅರ್ಧ ತಿಂದ ಹಣ್ಣುಗಳು ಮತ್ತು ಡಯಾಪರ್‌ಗಳನ್ನು ನೋಡಿದ ಸೇನೆ, ಮಕ್ಕಳು ಬದುಕಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿತ್ತು. ಈ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಟ್ವೀಟ್‌ ಮಾಡಿ ಹಂಚಿಕೊಂಡಿದ್ದರು.

ADVERTISEMENT

ಕರಿಚಿರತೆ, ಹಾವುಗಳು, ಪರಭಕ್ಷಕ ಜೀವಿಗಳು ಜೊತೆಗೆ ಶಸ್ತಾಸ್ತ್ರಗಳು, ಮಾದಕ ವಸ್ತುಗಳ ಕಳ್ಳಸಾಗಣೆಗೆ ನೆಲೆಯಾಗಿರುವ ಕಾಡಿನಲ್ಲಿ ಮಕ್ಕಳು ಹೇಗೆ ಬದುಕುಳಿದರು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ ಸೇನಾ ಪಡೆ ಹಲವು ಬಗೆಯಲ್ಲಿ ಮಕ್ಕಳನ್ನು ಪತ್ತೆ ಹಚ್ಚಲು ಪ್ರಯತ್ನಿಸಿತ್ತು. ಮಕ್ಕಳು ಸ್ಪ್ಯಾನಿಶ್‌ ಭಾಷೆ ಮಾತನಾಡುವುದಿಂದ ಮಕ್ಕಳ ಅಜ್ಜಿಯ ಧ್ವನಿ ಸುರುಳಿಯನ್ನು ಪ್ರಸಾರ ಮಾಡಿ ಮುಂದೆ ಸಾಗದಂತೆ ಹೇಳಿತು. ಅಲ್ಲದೇ ಹಸಿವು ಮತ್ತು ನೀರಿಲ್ಲದೆ ಸಾಯುವುದನ್ನು ತಪ್ಪಿಸಲು ಮೇಲಿನಿಂದ ಕಾಡಿನೊಳಗೆ ಆಹಾರದ ಪೊಟ್ಟಣ, ನೀರು ಬಾಟಲಿಯನ್ನು ಎಸೆಯಿತು.

ಈ ಬಗ್ಗೆ ಟ್ವೀಟ್‌ ಮಾಡಿರುವ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ, ‘ಇದೊಂದು ಮ್ಯಾಜಿಕಲ್‌ ದಿನವಾಗಿದೆ. ಹುಡುಕಾಟದ 40 ದಿನಗಳ ನಂತರ ಸೇನಾಪ‍ಡೆ ಮತ್ತು ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲೂ ಬದುಕುಳಿಯುವ ಮಾರ್ಗವನ್ನು ಕಂಡು ಹಿಡಿದ ಮಕ್ಕಳ ಧೈರ್ಯವನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ‘ ಎಂದು ಹೇಳಿದರು.

ಈ ಹಿಂದೆ ಪೆಟ್ರೋ ಟ್ವೀಟ್ ಮಾಡಿ ಮಕ್ಕಳು ಪತ್ತೆಯಾಗಿರುವುದಾಗಿ ಹೇಳಿದ್ದರು. ಮರುದಿನ ತಾವು ತಪ್ಪು ಮಾಹಿತಿ ನೀಡಿರುವುದಾಗಿ, ಮಕ್ಕಳು ಬದುಕಿರುವ ಕುರುಹುಗಳು ಪತ್ತೆಯಾಗಿರುವುದಾಗಿ ಮಾಹಿತಿಯನ್ನು ಸರಿಪಡಿಸಿಕೊಂಡಿದ್ದರು.

ಮಕ್ಕಳು ಬದುಕುಳಿದಿರುವ ಬಗ್ಗೆ ಮಕ್ಕಳ ಅಜ್ಜ ಸ್ಥಳೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.