ADVERTISEMENT

ಚಿಲಿಯಲ್ಲಿ ಸರ್ವಾಧಿಕಾರಿ ಸಂವಿಧಾನ ಬದಲಾವಣೆಗೆ ಜನಮತ: ಹೊಸ ಸಂವಿಧಾನದತ್ತ ಹೆಜ್ಜೆ

ಏಜೆನ್ಸೀಸ್
Published 26 ಅಕ್ಟೋಬರ್ 2020, 14:34 IST
Last Updated 26 ಅಕ್ಟೋಬರ್ 2020, 14:34 IST
 ಸಂವಿಧಾನ ಬದಲಾವಣೆ ಜನಮತ ಸಂಗ್ರಹಣೆಯಲ್ಲಿ ಮತಚಲಾವಣೆ ಮಾಡಲು ಸ್ಯಾಂಟಿಯಾಗೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿನ ಮತದಾನ ಕೇಂದ್ರವೊಂದಲ್ಲಿ ಜನ ಸಾಲುಗಟ್ಟಿ ನಿಂತಿರುವ ಚಿತ್ರ  (ಎಎಫ್‌ಪಿ ಚಿತ್ರ)
ಸಂವಿಧಾನ ಬದಲಾವಣೆ ಜನಮತ ಸಂಗ್ರಹಣೆಯಲ್ಲಿ ಮತಚಲಾವಣೆ ಮಾಡಲು ಸ್ಯಾಂಟಿಯಾಗೊದ ರಾಷ್ಟ್ರೀಯ ಕ್ರೀಡಾಂಗಣದಲ್ಲಿನ ಮತದಾನ ಕೇಂದ್ರವೊಂದಲ್ಲಿ ಜನ ಸಾಲುಗಟ್ಟಿ ನಿಂತಿರುವ ಚಿತ್ರ (ಎಎಫ್‌ಪಿ ಚಿತ್ರ)   

ಸ್ಯಾಂಟಿಯಾಗೊ: ಚಿಲಿಯಲ್ಲಿ ನಡೆದ ಐತಿಹಾಸಿಕ ಜನಾಭಿಪ್ರಾಯ ಸಂಗ್ರಹದಲ್ಲಿ ಸರ್ವಾಧಿಕಾರಿ ಯುಗದ ಸಂವಿಧಾನ ಬದಲಿಸುವ ಪರವಾಗಿ ಅಲ್ಲಿನ ಜನ ದೊಡ್ಡ ಪ್ರಮಾಣದಲ್ಲಿ ಮತಚಲಾವಣೆ ಮಾಡಿದ್ದಾರೆ.

1973–1990ರ ಅಗಸ್ಟೋ ಪಿನೋಚೆಟ್‌ ಅಧಿಕಾರವಧಿಯಿಂದ ಆರಂಭವಾದ, ಸದ್ಯ ಚಿಲಿಯಲ್ಲಿ ಅಸ್ತಿತ್ವದಲ್ಲಿರುವ ಸರ್ವಾಧಿಕಾರಿ ಸಂವಿಧಾನವನ್ನು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗೆ ಮೂಲ ಕಾರಣ ಎಂದು ಅಲ್ಲಿನ ಜನ ಭಾವಿಸಿದ್ದಾರೆ. ಭಾನುವಾರ ಜನಾಭಿಪ್ರಾಯ ಸಂಗ್ರಹದಲ್ಲಿ ದೇಶದ ನಾಗರಿಕರು ಈ ಸಂವಿಧಾನವನ್ನು ಕಿತ್ತೆಸೆದಿದ್ದಾರೆ.

ಚಲಾವಣೆಗೊಂಡ ಒಟ್ಟು ಶೇ 99 ಮತಗಳಲ್ಲಿ ಶೇ 78.28 ಮತಗಳು ಸಂವಿಧಾನ ಬದಲಾವಣೆ ಪರವಾಗಿ ಚಲಾವಣೆಗೊಂಡಿರುವುದು ಸೋಮವಾರ ಬಹಿರಂಗವಾಗಿದೆ. ಜನಾಭಿಪ್ರಾಯ ಸಂಗ್ರದಲ್ಲಿ ಬದಲಾವಣೆ ಪರ ಫಲಿತಾಂಶ ಹೊಮ್ಮುತ್ತಲೇ, ಜನ ಬೀದಿಗಿಳಿದು ಸಂಭ್ರಮಿಸಿದರು. ರಾಜಧಾನಿ ಸ್ಯಾಂಟಿಯಾಗೊದಲ್ಲಿ ಜನರ ಹರ್ಷೋದ್ಘಾರ ಮುಗಿಲು ಸ್ಪರ್ಶಿಸಿತ್ತು.

ADVERTISEMENT

‘ಚಿಲಿಯಾರಾದ ನಾವು ಇಂಥ ಮಹತ್ತರ ಬದಲಾವಣೆ ಮಾಡುವಷ್ಟು ಸಮರ್ಥರಾಗಿದ್ದೇವೆ ಎಂದು ನಾನು ಎಂದಿಗೂ ನಂಬಿರಲಿಲ್ಲ!’ ಎಂದು 46ರ ವರ್ಷದ ಮರಿಯಾ ಇಸಾಬೆಲ್ ನುನೆಜ್ ಹೇಳಿದರು. ಆಕೆ ತನ್ನ 20 ವರ್ಷದ ಮಗಳೊಂದಿಗೆ ಭಾರಿ ಜನಸ್ತೋಮದ ನಡುವೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

ಫಲಿತಾಂಶವನ್ನು ಸ್ವಾಗತಿಸಿದ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ, ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ, ಅರಮನೆ 'ಲಾ ಮೊನೆಡಾ’ದಿಂದ ದೇಶವನ್ನು ಉದ್ದೇಶಿ ರೇಡಿಯೊ ಮೂಲಕ ಮಾತನಾಡಿದರು. ‘ದೇಶದ ಹೊಸ ಸಂವಿಧಾನಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಈ ಜನಾಭಿಪ್ರಾಯ ಸಂಗ್ರಹವು ಅಂತ್ಯವಲ್ಲ. ಇದು ಚಿಲಿಯ ಹೊಸ ಸಂವಿಧಾನವನ್ನು ರಚಿಸಿಕೊಳ್ಳಲು ನಾವೆಲ್ಲರೂ ಒಟ್ಟಾಗಿ ನಡೆಯಬೇಕಾದ ಹಾದಿಯ ಆರಂಭವಾಗಿದೆ,’ ಎಂದು ಹೇಳಿದರು.

‘ಇಲ್ಲಿಯವರೆಗೆ, ಸಂವಿಧಾನವು ನಮ್ಮನ್ನು ವಿಭಜಿಸಿದೆ. ಇಂದಿನಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಆದ್ದರಿಂದ, ಹೊಸ ಸಂವಿಧಾನವು ಏಕತೆ, ಸ್ಥಿರತೆ ಮತ್ತು ಭವಿಷ್ಯದ ದೊಡ್ಡ ಚೌಕಟ್ಟಾಗಿದೆ,’ ಎಂದು ಪಿನೆರಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.