ಬೀಜಿಂಗ್: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೇರಿದಂತೆ ಡೊನಾಲ್ಡ್ ಟ್ರಂಪ್ ಅವರ ಆಡಳಿತದಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದ ಇತರ 27 ಮಂದಿಗೆ ಪ್ರಮುಖ ಚೀನಾ ನಿರ್ಬಂಧ ವಿಧಿಸಿದೆ.
ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಚೀನಾ ಈ ಕ್ರಮ ಕೈಗೊಂಡಿದೆ. ಚೀನಾದ ಹಿತಾಸಕ್ತಿಯನ್ನು ಕಡೆಗಣಿಸಿದ್ದಕ್ಕಾಗಿ ಈ ಕ್ರಮಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
‘ಮೈಕ್ ಪಾಂಪಿಯೊ ಮತ್ತು ಇತರ 27 ಮಂದಿ ಹಾಗೂ ಇವರ ಕುಟುಂಬದ ಸದಸ್ಯರು ಚೀನಾ, ಹಾಂಗ್‌ಕಾಂಗ್ ಹಾಗೂ ಮಕಾವು ಪ್ರವೇಶಿಸದಂತೆ ನಿಷೇಧಿಸಲಾಗಿದೆ. ಇವರಿಗೆ ಸಂಬಂಧಿಸಿದ ಕಂಪನಿಗಳು ಅಥವಾ ಸಂಸ್ಥೆಗಳು ಸಹ ಚೀನಾ ಜತೆ ಯಾವುದೇ ರೀತಿ ವಹಿವಾಟು ನಡೆಸದಂತೆ ನಿರ್ಬಂಧಿಸಲಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಹು ಚುನ್ಯಿಂಗ್ ತಿಳಿಸಿದ್ದಾರೆ
‘ಕಳೆದ ಕೆಲವು ವರ್ಷಗಳಿಂದ ಅಮೆರಿಕದಲ್ಲಿನ ಕೆಲವು ಚೀನಾ ವಿರೋಧಿ ರಾಜಕಾರಣಿಗಳು ತಮ್ಮ ಸ್ವಾರ್ಥ ರಾಜಕೀಯ ಹಿತಾಸಕ್ತಿಗಾಗಿ ಮತ್ತು ಪೂರ್ವಾಗ್ರಹಪೀಡಿತರಾಗಿ ಚೀನಾ ವಿರುದ್ಧ ದ್ವೇಷ ಸಾಧಿಸಿದರು. ಚೀನಾ ಮತ್ತು ಅಮೆರಿಕ ಜನರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಇವರು ಕಡೆಗಣಿಸಿದ್ದರು. ಕೇವಲ ಹುಚ್ಚು ನಿರ್ಧಾರಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿದ್ದರು ಮತ್ತು ಪ್ರಚೋದನೆ ಸಹ ನೀಡಿದ್ದರು. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನ ಸಹ ಮಾಡಲಾಯಿತು’ ಎಂದು ಹು ಕಿಡಿಕಾರಿದ್ದಾರೆ.
‘ಚೀನಾ ಸರ್ಕಾರ ದೇಶದ ರಾಷ್ಟ್ರೀಯ ಸಾರ್ವಭೌಮತ್ವ, ಭದ್ರತೆ ಮತ್ತು ಅಭಿವೃದ್ಧಿ ಹಿತಾಸಕ್ತಿ ಕಾಪಾಡಲು ಸದಾ ಬದ್ಧವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಮೈಕ್ ಪಾಂಪಿಯೊ ಅವರನ್ನು ಚೀನಾ ಪ್ರಮುಖವಾಗಿ ಗುರಿಯಾಗಿರಿಸಿಕೊಂಡಿದೆ. ಪಾಂಪಿಯೊ ಚೀನಾ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದ್ದರು. ಪಶ್ಚಿಮ ಷಿಂಜಿಯಾಂಗ್ ಪ್ರಾಂತ್ಯದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ನರಮೇಧವಾಗುತ್ತಿದೆ ಎಂದು ಪಾಂಪಿಯೊ ಆರೋಪಿಸಿದ್ದರು.
ಈ ಬಗ್ಗೆಯೂ ಕಟುವಾಗಿ ಪ್ರತಿಕ್ರಿಯಿಸಿರುವ ಹು, ‘ಪಾಂಪಿಯೊ ಹಲವು ಬಾರಿ ವಿಷಕಾರಿ ಸುಳ್ಳುಗಳನ್ನು ಹೇಳಿದ್ದಾರೆ. ಅವರೊಬ್ಬ ಕುಖ್ಯಾತ ಸುಳ್ಳುಗಾರ ಮತ್ತು ಮೋಸಗಾರ. ಸತ್ಯವನ್ನೇ ಅವರು ತಿರುಚಿದ್ದರು. ಅವರ ಹೇಳಿಕೆಗಳು ಶತಮಾನದ ಜೋಕ್‌ಗಳಾಗಿದ್ದವು’ ಎಂದು ಹೇಳಿದ್ದಾರೆ.
ಇದನ್ನೂ ಓದಿ:15 ಮಹತ್ವದ ಕಾರ್ಯಾದೇಶಗಳಿಗೆ ಬೈಡನ್ ಸಹಿ
‘ಮಾನವೀಯತೆ ಮತ್ತು ನರಮೇಧದ ಬಗ್ಗೆ ಅಂತರರಾಷ್ಟ್ರೀಯ ಕಾನೂನಿನಲ್ಲಿ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಷಿಂಜಿಯಾಂಗ್ ಪ್ರಾಂತ್ಯದಲ್ಲಿ ನರಮೇಧ ನಡೆಯುತ್ತಿದೆ ಎಂದು ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು. ಕೆಲವು ಚೀನಾ ವಿರೋಧಿ ಶಕ್ತಿಗಳು ಇಂತಹ ಸುಳ್ಳನ್ನು ವೈಭವೀಕರಿಸಿದ್ದವು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.