ನವದೆಹಲಿ: ಭಾರತಕ್ಕೆ ಹೊಂದಿಕೊಂಡಂತಿರುವ ಟಿಬೆಟ್ ಮತ್ತು ಷಿಂಜಿಯಾಂಗ್ ಪ್ರಾಂತ್ಯಗಳಲ್ಲಿ ಚೀನಾ ಸುಮಾರು 30 ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ ಅಥವಾ ನಿರ್ಮಾಣ ಮಾಡುತ್ತಿದೆ ಎಂದು ಚೀನಾದ ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಭಾರತದ ಗಡಿ ಸಮೀಪದ ಈ ಪ್ರದೇಶಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಿರುವುದರಿಂದ ಈ ಪ್ರದೇಶದಲ್ಲಿ ಚೀನಾದ ನಾಗರಿಕ ಮತ್ತು ಮಿಲಿಟರಿ ಮೂಲಸೌಕರ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇತ್ತೀಚೆಗೆ ಚೀನಾ ಟಿಬೆಟ್‌ನಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ, ಅರುಣಾಚಲ ಪ್ರದೇಶಕ್ಕೆ ಸಮೀಪದಲ್ಲೇ ಇರುವ ನಿಯಿಂಗ್ಚಿಯನ್ನು ಪ್ರಾದೇಶಿಕ ರಾಜಧಾನಿ ಲಾಸಾಕ್ಕೆ ಸಂಪರ್ಕಿಸುವ ಬುಲೆಟ್ ರೈಲನ್ನು ಚೀನಾ ಆರಂಭಿಸಿತ್ತು. ಈ ಮೂಲಕ ಗಡಿ ಪ್ರದೇಶದೊಂದಿಗಿನ ಸಂಪರ್ಕವನ್ನು ಬಲಪಡಿಸಿತ್ತು.
‘ಷಿಂಜಿಯಾಂಗ್ ಮತ್ತು ಟಿಬೆಟ್‌ನಲ್ಲಿ ಪ್ರಸ್ತುತ ಸುಮಾರು 30 ನಾಗರಿಕ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಅಥವಾ ನಿರ್ಮಾಣ ಮಾಡಲಾಗುತ್ತಿದೆ,‘ ಎಂದು ಚೀನಾದ ಸೇನೆಯಾಗಿರುವ ‘ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)–ಯ‘ವೆಸ್ಟರ್ನ್ ಥಿಯೇಟರ್ ಕಮಾಂಡ್ (ಡಬ್ಲ್ಯುಟಿಸಿ)’ನ ಮಿಲಿಟರಿ ಸಾರಿಗೆ ರವಾನೆ ಕೇಂದ್ರದ ಉಸ್ತುವಾರಿ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ವಾಹಿನಿ ‘ಚಿನಾಮಿಲ್’ ವರದಿ ಮಾಡಿದೆ.
ಗಡಿ ಪ್ರದೇಶಗಳಲ್ಲಿ ನಾಗರಿಕ ವಿಮಾನಯಾನದ ತ್ವರಿತ ಅಭಿವೃದ್ಧಿಯು ವಾಯು ಸಾರಿಗೆಗೆ ಅನುಕೂಲ ಕಲ್ಪಿಸಲಿದೆ ಎಂದು ಎಂದು ಪಿಎಲ್‌ಎ ಅಧಿಕಾರಿ ತಿಳಿಸಿದ್ದಾರೆ ಎನ್ನಲಾಗಿದೆ.
ಟಿಬೆಟ್ ಸ್ವಾಯತ್ತ ಪ್ರದೇಶ ಹಾಗೂ ಭಾರತದೊಂದಿಗಿನ ಗಡಿ ಪ್ರದೇಶದ ಉಸ್ತುವಾರಿಯನ್ನುಚೀನಾದ ಸೇನೆ ಪಿಎಲ್‌ಎನ ಭಾಗವಾಗಿರುವ ‘ವೆಸ್ಟರ್ನ್ ಥಿಯೇಟರ್ ಕಮಾಂಡ್’ ನೋಡಿಕೊಳ್ಳುತ್ತಿದೆ.
ಗಡಿ ಪ್ರದೇಶದಲ್ಲಿ ರೈಲು, ರಸ್ತೆ ಮತ್ತು ವಿಮಾನ ನಿಲ್ದಾಣಗಳಂಥ ಮೂಲಸೌಕರ್ಯವನ್ನು ಚೀನಾ ಅತ್ಯಂತ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡುತ್ತಿದೆ. ಇದರ ಫಲವಾಗಿ ಗಡಿ ಪ್ರದೇಶಗಳಿಗೆ ಸೈನಿಕರು, ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಅತ್ಯಂತ ವೇಗವಾಗಿ ಸಾಗಿಸುವ ಸಾಮರ್ಥ್ಯವನ್ನು ಚೀನಾ ಗಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.