ವಾಷಿಂಗ್ಟನ್: ಭಾರತದೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ತನ್ನ ಹಕ್ಕುಗಳನ್ನು ಸಾಧಿಸಲು ಚೀನಾ ಯುದ್ಧತಂತ್ರದ ಕ್ರಮ ತೆಗೆದುಕೊಳ್ಳುವುದನ್ನು ಮುಂದುವರೆಸಿದೆ ೆಂದು ಪೆಂಟಗನ್ ಹೇಳಿದೆ. ಆದರೆ, ಅಮೆರಿಕದೊಂದಿಗೆ ಭಾರತದ ಸಂಬಂಧ ಗಾಢವಾಗದಂತೆ ತಡೆಯಲು ಅದು ವಿಫಲವಾಗಿದೆ ಎಂದು ಅದು ತಿಳಿಸಿದೆ.
‘ಭಾರತವು ಅಮೆರಿಕದ ಜೊತೆ ನಿಕಟ ಪಾಲುದಾರಿಕೆ ಮೂಲಕ ಗಡಿಯಲ್ಲಿ ಬಲವಾಗುವುದನ್ನು ತಡೆಯಲು ಪಿಆರ್‌ಸಿ (ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ)ಯು ಪ್ರಯತ್ನಿಸಿದೆ. ಭಾರತದೊಂದಿಗಿನ ಪಿಆರ್‌ಸಿ ಸಂಬಂಧದಲ್ಲಿ ಹಸ್ತಕ್ಷೇಪ ಮಾಡದಂತೆ ಅಮೆರಿಕದ ಅಧಿಕಾರಿಗಳಿಗೆ ಪಿಆರ್‌ಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ’ ಎಂದು ಅಮೆರಿಕದ ರಕ್ಷಣಾ ಇಲಾಖೆಯು ಬುಧವಾರ ಅಮೆರಿಕ ಕಾಂಗ್ರೆಸ್‌ಗೆ ತಿಳಿಸಿದೆ.
ಪೂರ್ವ ಲಡಾಖ್‌ನಲ್ಲಿ ಭಾರತ-ಚೀನೀ ಮಿಲಿಟರಿ ಬಿಕ್ಕಟ್ಟಿನ ಕುರಿತು ಪೆಂಟಗನ್ ನಿಯಮಿತವಾಗಿ ಕಾಂಗ್ರೆಸ್‌ಗೆ ವರದಿ ಮಾಡುತ್ತದೆ. ಚೀನಾ ತನ್ನ ನೆರೆಹೊರೆಯವರೊಂದಿಗೆ, ವಿಶೇಷವಾಗಿ ಭಾರತದೊಂದಿಗೆ ಆಕ್ರಮಣಕಾರಿ ಮತ್ತು ಬಲವಂತದ ಕ್ರಮದಲ್ಲಿ ತೊಡಗಿಸಿಕೊಂಡಿದೆ ಎಂದು ರಕ್ಷಣಾ ಇಲಾಖೆ ಸ್ಪಷ್ಟವಾಗಿ ಹೇಳಿದೆ.
ಮೇ 2020ರಿಂದ ಚೀನಾ ಸೇನೆಯು ಗಡಿಯುದ್ದಕ್ಕೂ ಸಾಂಪ್ರದಾಯಿಕವಾಗಿ ಭಾರತ ನಿಯಂತ್ರಿತ ಪ್ರದೇಶಕ್ಕೆ ಆಕ್ರಮಣಗಳನ್ನು ಪ್ರಾರಂಭಿಸಿದೆ. ಎಲ್‌ಎಸಿ ಉದ್ದಕ್ಕೂ ಹಲವಾರು ಸ್ಟ್ಯಾಂಡ್‌ಆಫ್ ಸ್ಥಳಗಳಲ್ಲಿ ಪಡೆಗಳನ್ನು ಕೇಂದ್ರೀಕರಿಸಿದೆ ಎಂದು ಪೆಂಟಗನ್ ಹೇಳಿದೆ.
ಜೂನ್ 2021ರ ಹೊತ್ತಿಗೆ, ಚೀನಾ ಮತ್ತು ಭಾರತವು ಎಲ್‌ಎಸಿ ಉದ್ದಕ್ಕೂ ದೊಡ್ಡ-ಪ್ರಮಾಣದ ಸೇನಾ ಜಮಾವಣೆ ಮಾಡಿದ್ದವು. ಸೇನಾಪಡೆಗಳನ್ನು ಹಿಂಪಡಯುವ ಮಾತುಕತೆಗಳು ಸೀಮಿತ ಪ್ರಗತಿಯನ್ನು ಸಾಧಿಸಿದ್ದು, ಈಗಲೂ ಸೇನೆ ಅಲ್ಲಿ ಬೀಡುಬಿಟ್ಟಿದೆ ಎಂದು ಪೆಂಟಗನ್ ಹೇಳಿದೆ.
ಇದರ ಜೊತೆಗೆ, ಕ್ಷಿಪ್ರ ಕಾರ್ಯಾಚರಣೆಗಾಗಿ ಟಿಬೆಟ್ ಮತ್ತು ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಗಳಿಂದ ಗಣನೀಯ ಪ್ರಮಾಣದ ಮೀಸಲು ಪಡೆಯನ್ನು ಪಶ್ಚಿಮ ಚೀನಾದ ಒಳಭಾಗಕ್ಕೆ ನಿಯೋಜಿಸಲಾಗಿದೆ.
ಜೂನ್ 2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯು 20 ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿತ್ತು. ಇದು 1975ರಿಂದ ಎಲ್‌ಎಸಿಯಲ್ಲಿ ನಡೆದ ಮೊದಲ ಜೀವಹಾನಿಯಾಗಿದೆ.
ಫೆಬ್ರುವರಿ 2021ರಲ್ಲಿ, ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್ (ಸಿಎಂಸಿ) ನಾಲ್ಕು ಪಿಎಲ್‌ಎ ಸೈನಿಕರಿಗೆ ಮರಣೋತ್ತರ ಪ್ರಶಸ್ತಿಗಳನ್ನು ಘೋಷಿಸಿತು. ಆದರೂ ಘರ್ಷಣೆಯಲ್ಲಿ ಮೃತಪಟ್ಟ ಚೀನೀ ಸೈನಿಕರ ಒಟ್ಟು ಸಂಖ್ಯೆ ಎಷ್ಟು ಎಂಬುದು ತಿಳಿದಿಲ್ಲ ಎಂದು ಅದು ಹೇಳಿದೆ.
ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಹೊರತಾಗಿಯೂ, ಎಲ್‌ಎಸಿಯಲ್ಲಿ ತನ್ನ ಹಕ್ಕುಗಳನ್ನು ಸಾಧಿಸಲು ಚೀನಾ ಯುದ್ಧತಂತ್ರದ ಕ್ರಮ ತೆಗೆದುಕೊಳ್ಳುವುದನ್ನು ಮುಂದುವರೆಸಿದೆ ಎಂದು ಪೆಂಟಗನ್ ಹೇಳಿದೆ.
2020 ರಲ್ಲಿ, ಎಲ್‌ಎಸಿಯ ಪೂರ್ವ ವಲಯದಲ್ಲಿ ಚೀನಾ ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಭಾರತದ ಅರುಣಾಚಲ ಪ್ರದೇಶ ರಾಜ್ಯದ ನಡುವಿನ ವಿವಾದಿತ ಪ್ರದೇಶದೊಳಗೆ ಚೀನಾ 100 ಮನೆಗಳ ದೊಡ್ಡ ನಾಗರಿಕ ಗ್ರಾಮವನ್ನು ನಿರ್ಮಿಸಿದೆ.
‘ಭಾರತ-ಚೀನಾ ಗಡಿಯಲ್ಲಿ ಚೀನಾದಿಂದ ಗ್ರಾಮ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಪ್ರಯತ್ನಗಳು ಭಾರತ ಸರ್ಕಾರಕ್ಕೆ ದಿಗ್ಭ್ರಮೆಯನ್ನುಂಟುಮಾಡಿದೆ’ ಎಂದು ಪೆಂಟಗನ್ ಹೇಳಿದೆ.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಎಲ್‌ಎಸಿ ಬಳಿ ಭಾರತವು ಮೂಲಸೌಕರ್ಯ ಅಭಿವೃದ್ಧಿ ಮಾಡುವ ಮೂಲಕ ಬಿಕ್ಕಟ್ಟನ್ನು ಪ್ರಚೋದಿಸಿದೆ ಎಂದು ಚೀನಾ ದೂಷಿಸಲು ಪ್ರಯತ್ನಿಸಿದೆ ಎಂದು ಅದು ಹೇಳಿದೆ.
ಎಲ್‌ಎಸಿಯಲ್ಲಿ ತನ್ನ ಸೇನಾ ನಿಯೋಜನೆಗಳು ಭಾರತದ ಪ್ರಚೋದನೆಗೆ ಪ್ರತಿಕ್ರಿಯೆಯಾಗಿವೆ ಎಂದು ಪ್ರತಿಪಾದಿಸಿದ ಬೀಜಿಂಗ್, ಭಾರತವು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವವರೆಗೆ ಮತ್ತು ಗಡಿಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಿಲ್ಲಿಸುವವರೆಗೆ ಪಡೆಗಳನ್ನು ಹಿಂಪಡೆಯುವುದಿಲ್ಲ ಎಂದಿರುವುದಾಗಿ ಪೆಂಟಗನ್ ಹೇಳಿದೆ.
ಈ ಮಧ್ಯೆ, ಬಿಕ್ಕಟ್ಟು ವ್ಯಾಪಕ ಮಿಲಿಟರಿ ಸಂಘರ್ಷವಾಗಿ ಬದಲಾಗುತ್ದಿರುವುದನ್ನು ತಡೆಯುವ ಗುರಿಯನ್ನು ಚೀನಾ ವ್ಯಕ್ತಪಡಿಸಿದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.