ADVERTISEMENT

ಸಚಿವ ವಿ.ಕೆ.ಸಿಂಗ್‌ ಹೇಳಿಕೆ: ಪ್ರತಿಕ್ರಿಯೆ ನೀಡಲು ಚೀನಾ ನಿರಾಕರಣೆ

ಪಿಟಿಐ
Published 22 ಜೂನ್ 2020, 14:02 IST
Last Updated 22 ಜೂನ್ 2020, 14:02 IST

ಬೀಜಿಂಗ್‌ : ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವ ವಿ.ಕೆ.ಸಿಂಗ್‌ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಚೀನಾ ಸೋಮವಾರ ನಿರಾಕರಿಸಿದೆ. ಈ ವಿಷಯ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದೆ.

‘ನಾವು 20 ಯೋಧರನ್ನು ಕಳೆದುಕೊಂಡರೆ, ನಮಗಿಂತ ಎರಡುಪಟ್ಟು ಚೀನಾ ಸೈನಿಕರು ಮೃತಪಟ್ಟಿದ್ದಾರೆ’ ಎಂದು ವಿ.ಕೆ.ಸಿಂಗ್‌ ಅವರು ಶನಿವಾರ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

‘ಗಡಿಯಲ್ಲಿನ ಪರಿಸ್ಥಿತಿ ತಿಳಿಗೊಳಿಸಲು ಉಭಯ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಹಂತದ ಮಾತುಕತೆ ನಡೆಸುತ್ತಿವೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್‌ ಸುದ್ದಿಗೋಷ್ಠಿಯಲ್ಲಿ ಪುನರುಚ್ಚರಿಸಿದ್ದಾರೆ. ಆದರೆ, ಸಚಿವ ಸಿಂಗ್‌ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ADVERTISEMENT

ಗಾಲ್ವನ್‌ ಕಣಿವೆಯಲ್ಲಿ ಜೂನ್‌ 15 ರಂದು ನಡೆದ ಘರ್ಷಣೆಯ ನಂತರ ತನ್ನ ಕಡೆ ಸಂಭವಿಸಿದ ಸಾವುನೋವುಗಳ ವಿವರಗಳನ್ನು ಬಹಿರಂಗ ಪಡಿಸಲು ಬೀಜಿಂಗ್‌ ನಿರಾಕರಿಸಿದೆ. ಆದರೆ, ಚೀನಾ ಕೂಡ ಸಾವುನೋವು ಅನುಭವಿಸಿದೆ ಎಂದು ಮಾಧ್ಯಮಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.