ಬೀಜಿಂಗ್: ಕ್ಸಿನ್ ಜಿಯಾಂಗ್‌ನಲ್ಲಿ ಉಯಿಘರ್ ಜನಾಂಗದ ಮುಸ್ಲಿಮರ ಜನಸಂಖ್ಯೆ ಕಡಿಮೆ ಮಾಡುವ ಉದ್ದೇಶಕ್ಕಾಗಿ ಆ ಸಮುದಾಯದ ಮಹಿಳೆಯರ ಮೇಲೆ ಬಲವಂತದ ಜನನ ನಿಯಂತ್ರಣ ಕ್ರಮ ಹೇರಿರುವುದನ್ನು ಚೀನಾ ಸೋಮವಾರ ನಿರಾಕರಿಸಿದೆ.
‘ಮಕ್ಕಳನ್ನು ತಯಾರಿಸುವ ಯಂತ್ರಗಳಾಗಿದ್ದ ಉಯಿಘರ್ ಮಹಿಳೆಯರನ್ನು ಚೀನಾ ಮುಕ್ತಗೊಳಿಸಿದೆ’ ಎಂದು ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯು ಟ್ವೀಟ್ ಮಾಡಿತ್ತು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚೀನಾ, ಬಲವಂತದ ಜನನ ನಿಯಂತ್ರಣ ಕ್ರಮ ಹೇರಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.
‘ಜನನ ನಿಯಂತ್ರಣ ನಿರ್ಧಾರ ವ್ಯಕ್ತಿಯ ಸ್ವಂತ ಇಚ್ಛೆ. ಈ ವಿಷಯದಲ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ’ ಎಂದು ಕ್ಸಿನ್ ಜಿಯಾಂಗ್ ಪ್ರಾದೇಶಿಕ ಸರ್ಕಾರದ ಉಪ ವಕ್ತಾರ ಕ್ಸು ಗುಕ್ಸಿಯಾಂಗ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಉಯಿಘರ್ ಜನಸಂಖ್ಯೆಯು ಕ್ಸಿನ್ ಜಿಯಾಂಗ್‌ನಲ್ಲಿರುವ ಚೀನಾದ ಬಹುಸಂಖ್ಯಾತ ಹ್ಯಾನ್ ಜನಾಂಗದ ಜನಸಂಖ್ಯೆಗಿಂತಲೂ ಹೆಚ್ಚಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ 2020ರ ಜೂನ್‌ನಲ್ಲಿ ನಡೆಸಿದ ತನಿಖೆಯ ಪ್ರಕಾರ, ‘ಚೀನಾದಲ್ಲಿ ಉಯಿಘರ್ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿಯೇ ಆ ಜನಾಂಗದ ಮಹಿಳೆಯರಿಗೆ ಬಲವಂತವಾಗಿ ಗರ್ಭನಿರೋಧಕ ಮಾತ್ರೆಗಳ ಬಳಕೆ, ಗರ್ಭಪಾತ ಇಲ್ಲವೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಲ್ಲಿನ ಸರ್ಕಾರ ಒತ್ತಾಯಿಸುತ್ತಿದೆ. ಉಯಿಘರ್ ಜತೆಗೆ ಕಖಕ್ ಮತ್ತು ಇತರ ಜನಾಂಗೀಯ ಅಲ್ಪಸಂಖ್ಯಾತರ ಮೇಲೂ ಚೀನಾ ಕಠಿಣವಾದ ಜನನ ನಿಯಂತ್ರಣ ಕ್ರಮಗಳನ್ನು ಹೇರಲಾಗುತ್ತಿದೆ’ ಎಂದು ವರದಿಯಾಗಿತ್ತು.
ಗರ್ಭನಿರೋಧಕದ ಬಳಕೆ, ಗರ್ಭಪಾತ ಇಲ್ಲವೇ ಶಸ್ತ್ರಚಿಕಿತ್ಸೆಗೆ ಒಪ್ಪದ ಉಯಿಘರ್ ಜನಾಂಗದ ಮಹಿಳೆಯರನ್ನು ಬಲವಂತವಾಗಿ ಬಂಧನ ಶಿಬಿರಗಳಲ್ಲಿ ಇರಿಸಲಾಗುತ್ತಿದೆ. ಮೂರು ಇಲ್ಲವೇ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರು ಭಾರಿ ಮೊತ್ತದ ದಂಡ ಪಾವತಿಸಲು ಸಾಧ್ಯವಾಗದಿದ್ದಲ್ಲಿ ಬಂಧನ ಶಿಬಿರ ಇಲ್ಲವೇ ಕಾರಾಗೃಹಗಳಲ್ಲಿ ಇರಿಸುವ ಬೆದರಿಕೆಯನ್ನೂ ಚೀನಾ ಒಡ್ಡುತ್ತಿದೆ ಎನ್ನಲಾಗಿದೆ.
‘ಚೀನಾದ ಫ್ಯಾಸಿಸ್ಟ್ ಸರ್ಕಾರವು ಬಲವಂತದ ದುಡಿಮೆ, ಬಲವಂತವಾಗಿ ಗರ್ಭಪಾತ, ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ನಿರ್ಮೂಲನೆ ಮಾಡಲು ಚಿತ್ರಹಿಂಸೆಗಳನ್ನು ನೀಡುತ್ತಿರುವುದುನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದೆ’ ಎಂದು ದಿ ಕೌನ್ಸಿಲ್ ಆನ್ ಅಮೆರಿಕನ್ ರಾಷ್ಟ್ರೀಯ ಕಾರ್ಯನಿರ್ವಾಹಕ ನಿರ್ದೇಶಕ ನಿಹಾದ್ ಅವಧ್ ಇಮೇಲ್‌ನಲ್ಲಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.