ಬೀಜಿಂಗ್:ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ತಡೆಗಾಗಿಅಮೆರಿಕ ಕಾಯ್ದೆ ರೂಪಿಸಿರುವುದಕ್ಕೆ ಚೀನಾ ಆಕ್ರೋಶ ವ್ಯಕ್ತಪಡಿಸಿದೆ.
‘ಅಮೆರಿಕ ತನ್ನ ತಪ್ಪನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು ಮತ್ತು ಚೀನಾದ ಹಿತಾಸಕ್ತಿಗೆ ಹಾನಿಯಾಗುವಂತೆ ಮಸೂದೆ ಬಳಸುವುದನ್ನು ನಿಲ್ಲಿಸುವಂತೆ ಚೀನಾ ಒತ್ತಾಯಿಸುತ್ತದೆ. ಕ್ಸಿನ್‌ಜಿಯಾಂಗ್‌ಗೆ ಸಂಬಂಧಿಸಿದ ಸಮಸ್ಯೆಗಳು ಮಾನವ ಹಕ್ಕುಗಳು, ಜನಾಂಗೀಯತೆ ಅಥವಾ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಹಿಂಸಾಚಾರ, ಭಯೋತ್ಪಾದನೆ ಮತ್ತು ಪ್ರತ್ಯೇಕವಾದದ ವಿರುದ್ಧದ ಹೋರಾಟಗಳಾಗಿವೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯ ಉಲ್ಲೇಖಿಸಿದೆ.
ಈ ಭಾಗದಲ್ಲಿ ಚೀನಾದ ನೀತಿಗಳನ್ನು ಅತಿಕ್ರಮಿಸುವ ದುರುದ್ದೇಶ ಅಮೆರಿಕದ್ದಾಗಿದೆ. ಇದಕ್ಕೆ ತಕ್ಕ ತಿರುಗೇಟನ್ನು ಚೀನಾ ನೀಡಲಿದೆ ಎಂದೂ ಎಚ್ಚರಿಸಿದೆ.
ಚೀನಾದಲ್ಲಿ ಉಯಿಘರ್ ಸೇರಿದಂತೆ ಇತರೆ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಜನಾಂಗೀಯ ಅಸ್ಮಿತೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಿರ್ಮೂಲನೆ ಮಾಡಲು ಯತ್ನಿಸುವವರನ್ನು ‘ದಿ ಉಯಿಘರ್ ಮಾನವ ಹಕ್ಕು ಉಲ್ಲಂಘನೆ ಕಾಯ್ದೆ 2020’ ಶಿಕ್ಷೆಗೆ ಒಳಪಡಿಸಲಿದೆ.
ಕಾಯ್ದೆಯುಉಯಿಘರ್ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುವ ಚೀನಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಿದೆ.ಕಾಯ್ದೆಗೆ ರಿಪಬ್ಲಿಕನ್ನರು ಮತ್ತು ಡೆಮಾಕ್ರಟಿಕ್ ಪಕ್ಷದ ಸರ್ವ ಸದಸ್ಯರಿಂದ ಬೆಂಬಲ ವ್ಯಕ್ತವಾಗಿದೆ. ಕಾಯ್ದೆಗೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ ನಂತರ ಚೀನಾ ಈ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.