ADVERTISEMENT

ಮಾಲ್ದೀವ್ಸ್ ಸಾರ್ವಭೌಮತ್ವಕ್ಕೆ ಚೀನಾ ಬೆಂಬಲ: ಮೊಹಮ್ಮದ್ ಮುಯಿಜು

ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರಕ್ಕೆ: ಮುಯಿಜು

ಪಿಟಿಐ
Published 15 ಜನವರಿ 2024, 14:22 IST
Last Updated 15 ಜನವರಿ 2024, 14:22 IST
ಚೀನಾ
ಚೀನಾ   

ಮಾಲೆ/ಬೀಜಿಂಗ್: ‘ಮಾಲ್ದೀವ್ಸ್‌ ಮತ್ತು ಚೀನಾ ಪರಸ್ಪರರ ಹಿತಾಸಕ್ತಿಗಳನ್ನು ಗೌರವಿಸುತ್ತಿದ್ದು, ನಮ್ಮ ಸಾರ್ವಭೌಮತ್ವವನ್ನು ಚೀನಾ ಸಂಪೂರ್ಣವಾಗಿ ಬೆಂಬಲಿಸುತ್ತದೆ’ ಎಂದು ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಹೇಳಿದ್ದಾರೆ.

ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಸಮಯದಲ್ಲಿ ಮುಯಿಜು ಅವರು ಈ ಹೇಳಿಕೆ ನೀಡಿದ್ದಾರೆ. ಅವರು ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿದೆ.

ಮಾಲ್ದೀವ್ಸ್‌ ಅಧ್ಯಕ್ಷರು ತಮ್ಮ ಮೊದಲ ಚೀನಾ ಭೇಟಿಯನ್ನು ಪೂರ್ಣಗೊಳಿಸಿ ಶನಿವಾರ ಸ್ವದೇಶಕ್ಕೆ ವಾಪಸಾಗಿದ್ದಾರೆ. ಚೀನಾ ಪರ ಒಲವಿರುವ ನಾಯಕ ಎನಿಸಿಕೊಂಡಿರುವ ಮುಯಿಜು, ಈ ಭೇಟಿಯ ವೇಳೆ ಚೀನಾ ಜತೆಗಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದರು. 

ADVERTISEMENT

‘1972ರಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಆರಂಭವಾದಾಗಿನಿಂದಲೂ ಮಾಲ್ದೀವ್ಸ್‌ನ ಅಭಿವೃದ್ಧಿಗೆ ಚೀನಾ ನೆರವು ನೀಡುತ್ತಾ ಬಂದಿದೆ’ ಎಂದು ಮುಯಿಜು ತಿಳಿಸಿದ್ದಾರೆ.

‘ಚೀನಾವು ಮಾಲ್ದೀವ್ಸ್‌ನ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುವ ದೇಶವಲ್ಲ. ಆದ್ದರಿಂದಲೇ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಇದೆ’ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ‘ಸಿಜಿಟಿಎನ್‌ ಚಾನೆಲ್‌’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮಾಲ್ದೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ಮಾರ್ಚ್‌ 15ರೊಳಗೆ ವಾಪಸು ಕರೆಯಿಸಿಕೊಳ್ಳಬೇಕು ಎಂದು ಮುಯಿಜು ಅವರು ಭಾರತ ಸರ್ಕಾರಕ್ಕೆ ಭಾನುವಾರ ಗಡುವು ವಿಧಿಸಿದ್ದಾರೆ. ಸರ್ಕಾರದ ಈಚಿನ ಮಾಹಿತಿ ಪ್ರಕಾರ, ಭಾರತದ 88 ಸೇನಾ ಸಿಬ್ಬಂದಿ ಮಾಲ್ದೀವ್ಸ್‌ನಲ್ಲಿದ್ದಾರೆ. ಭಾರತ ನೀಡಿರುವ ಡಾರ್ನಿಯರ್‌ ವಿಮಾನ ಮತ್ತು ಎರಡು ಹೆಲಿಕಾಪ್ಟರ್‌ಗಳ ಕಾರ್ಯಾಚರಣೆ ನಿರ್ವಹಿಸಲು ಅವರು ಅಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.