ನವದೆಹಲಿ: ಶ್ರೀಲಂಕಾದ ಹಂಬನ್‌ಟೋಟ ಬಂದರಿಗೆ ಮಂಗಳವಾರ ಪ್ರವೇಶಿಸಿರುವ 'ಯುವಾನ್ ವಾಂಗ್ 5' ನೌಕೆಯ ಸಾಗರ ವೈಜ್ಞಾನಿಕ ಸಂಶೋಧನೆಗೆ ಅಡ್ಡಿಯಾಗದಂತೆ ಭಾರತಕ್ಕೆ ಚೀನಾ ಮನವಿ ಮಾಡಿದೆ.
ಯುವಾನ್ ವಾಂಗ್ 5 ಹಡಗಿನ ಸಾಗರ ವೈಜ್ಞಾನಿಕ ಸಂಶೋಧನಾ ಚಟುವಟಿಕೆಗಳು ಅಂತರರಾಷ್ಟ್ರೀಯ ಕಾನೂನು ಮತ್ತು ಅಂತರರಾಷ್ಟ್ರೀಯ ಸಾಂಪ್ರದಾಯಿಕ ಅಭ್ಯಾಸಕ್ಕೆ ಅನುಗುಣವಾಗಿದೆ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವ್ಯಾಂಗ್ ವೆನ್‌ಬಿನ್ ತಿಳಿಸಿದ್ದಾರೆ.
ಬೀಜಿಂಗ್‌ನಲ್ಲಿ ವರದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಶ್ರೀಲಂಕಾದ ಬಂದರಿನಲ್ಲಿ ಚೀನಾ ಹಡಗಿನ ಸಾನಿಧ್ಯವು ಯಾವುದೇ ದೇಶದ ಭದ್ರತೆ ಹಾಗೂ ಅರ್ಥಿಕ ಹಿತಾಸಕ್ತಿಗಳ ಮೇಲೆ ಯಾವುದೇ ಪರಿಣಾಮವನ್ನು ಬಿರುವುದಿಲ್ಲ. ಹಾಗಾಗಿ ಮೂರನೇ ದೇಶವು ಸಾಗರ ವೈಜ್ಞಾನಿಕ ಸಂಶೋಧನೆಗೆ ಅಡ್ಡಿಯಾಗಬಾರದು ಎಂದು ಹೇಳಿದ್ದಾರೆ.
ಭಾರತದ ದಕ್ಷಿಣ ಕರಾವಳಿ ತೀರಕ್ಕೆ ಹತ್ತಿರವಾಗಿ ಶ್ರೀಲಂಕಾದ ಬಂದರಿಗೆ ಚೀನಾದ ಅತ್ಯಾಧುನಿಕ ಕಣ್ಗಾವಲು ಮತ್ತು ಸಂಶೋಧನಾ ನೌಕೆಯು ಪ್ರವೇಶದ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿತ್ತು.
ಕೊನೆಗೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಬಳಕೆ ಮಾಡುವ ಉಪಗ್ರಹಗಳ ಜಾಡು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಹಡಗು ಹಂಬನ್‌ಟೋಟ ಬಂದರಿನಲ್ಲಿ ಮಂಗಳವಾರ ಲಂಗರು ಹಾಕಿತ್ತು.
ದಾಸ್ತಾನುಗಳ ಮರುಪೂರಣ ಉದ್ದೇಶದೊಂದಿಗೆ ಲಂಕಾಗೆ ಪ್ರವೇಶಿಸಿರುವ ಹಡಗು ಒಂದು ವಾರದ ವರೆಗೆ (ಆ. 22) ಹಂಬನ್‌ಟೋಟ ಬಂದರಿನಲ್ಲಿ ಇರಲಿದೆಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.