ಮ್ಯೂನಿಕ್: ಚೀನಾವು ಒಪ್ಪಂದಗಳನ್ನು ಉಲ್ಲಂಘಿಸಿ ಸೇನೆಯನ್ನು ಗಡಿಯ ಬಳಿಗೆ ತಂದ ಕಾರಣ ಆ ದೇಶದ ಜತೆಗಿನ ಭಾರತದ ಸಂಬಂಧವು ‘ಅತ್ಯಂತ ಕ್ಲಿಷ್ಟಕರ ಹಂತ’ಕ್ಕೆ ತಲುಪಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
‘45 ವರ್ಷಗಳ ಕಾಲ ಶಾಂತಿ ಇತ್ತು. ಗಡಿ ನಿರ್ವಹಣೆ ಸ್ಥಿರವಾಗಿತ್ತು. 1975ರ ಬಳಿಕ ಗಡಿಯಲ್ಲಿ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿ ಯಾವುದೇ ಸಾವು–ನೋವು ಉಂಟಾಗಿರಲಿಲ್ಲ. ಗಡಿಯ ಸಮೀಪಕ್ಕೆ ಸೇನೆಯನ್ನು ತರಬಾರದು ಎಂದು ಚೀನಾದ ಜತೆಗೆ ನಾವು ಒಪ್ಪಂದ ಮಾಡಿಕೊಂಡಿದ್ದರಿಂದ ಇದು ಸಾಧ್ಯವಾಗಿತ್ತು. ಈಗ ಚೀನಾವು ಆ ಒಪ್ಪಂದಗಳನ್ನು ಉಲ್ಲಂಘಿಸಿದೆ’ ಎಂದು ಅವರು ಹೇಳಿದ್ದಾರೆ.
ಮ್ಯೂನಿಕ್ ಭದ್ರತಾ ಸಮಾವೇಶದ (ಎಂಎಸ್‌ಸಿ) ಚರ್ಚಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.
ಗಡಿಯ ಸ್ಥಿತಿಯು ಸಂಬಂಧದ ಸ್ಥಿತಿಯನ್ನು ನಿರ್ಧರಿಸುವುದು ಅತ್ಯಂತ ಸಹಜ. ಗಡಿಯ ಸ್ಥಿತಿಯಿಂದಾಗಿಯೇ ಚೀನಾದ ಜತೆಗಿನ ಸಂಬಂಧವು ಕ್ಲಿಷ್ಟಕರ ಸ್ಥಿತಿಗೆ ತಲುಪಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಾಂಗಾಂಗ್ ಸರೋವರ ಪ್ರದೇಶದಲ್ಲಿ ನಡೆದ ಸಂಘರ್ಷದ ಬಳಿಕ ಭಾರತ–ಚೀನಾ ಸಂಬಂಧವು ಬಿಕ್ಕಟ್ಟಿಗೆ ಸಿಲುಕಿತ್ತು. ಎರಡೂ ದೇಶಗಳು ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದ್ದವು. 2020ರ ಜೂನ್ 15ರಂದು ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಬಿಕ್ಕಟ್ಟು ಉಲ್ಬಣಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.