ಬೀಜಿಂಗ್(ಎಎಫ್‌ಪಿ): ಪೆಸಿಫಿಕ್ ಸಾಗರದಲ್ಲಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ (ಐಸಿಬಿಎಂ) ಪರೀಕ್ಷಾರ್ಥ ಉಡಾವಣೆಯನ್ನು ಬುಧವಾರ ನೆರವೇರಿಸಿದ್ದಾಗಿ ಚೀನಾ ಹೇಳಿದೆ.
ಅಪರೂಪವೆಂಬಂತೆ, ದಶಕಗಳಲ್ಲಿ ಇದೇ ಮೊದಲ ಬಾರಿಗೆ ಪೆಸಿಫಿಕ್ ಸಾಗರದಲ್ಲಿ ಚೀನಾ ಈ ಉಡ್ಡಯನ ಮಾಡಿದೆ.
‘ಚೀನಾ ಸೇನೆಯ ರಾಕೆಟ್‌ಗಳ ಪಡೆಯು, ಸೆ.25ರ ಬೆಳಿಗ್ಗೆ 8.44ಕ್ಕೆ ನಕಲಿ ಸಿಡಿತಲೆ ಹೊತ್ತ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪೆಸಿಫಿಕ್ ಸಾಗರದಲ್ಲಿ ಉಡಾಯಿಸಿತು. ಕ್ಷಿಪಣಿಯು ಸಾಗರದಲ್ಲಿನ ನಿರ್ದಿಷ್ಟ ಪ್ರದೇಶದಲ್ಲಿ ಬಿತ್ತು’ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.
ಚೀನಾದ ಈ ನಡೆಗೆ, ಪೆಸಿಫಿಕ್ ಸಾಗರ ಪ್ರದೇಶದ ರಾಷ್ಟ್ರಗಳು ಆಕ್ಷೇಪಿಸಿದ್ದು, ಪ್ರತಿಭಟನೆಯನ್ನೂ ದಾಖಲಿಸಿವೆ.
‘ಕ್ಷಿಪಣಿ ಪರೀಕ್ಷೆ ಕುರಿತಂತೆ ತನಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ಈ ಕಡಲ ಪ್ರದೇಶದಲ್ಲಿ ಚೀನಾ ತನ್ನ ಸೇನೆ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಯತ್ನಿಸುತ್ತಿರುವುದು ಕಳವಳಕಾರಿ’ ಎಂದು ಜಪಾನ್ ಹೇಳಿದೆ.
‘ಇದು ಬಹಳ ಅಸಹಜ ಮತ್ತು ದಶಕಗಳಲ್ಲಿಯೇ ಮೊದಲ ಬಾರಿಗೆ ಕೈಗೊಂಡಿರುವ ಪರೀಕ್ಷೆಯಾಗಿರುವ ಸಾಧ್ಯತೆ ಇದೆ’ ಎಂದು ಕಾರ್ನಿಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್‌ನಲ್ಲಿ ಹಿರಿಯ ಫೆಲೊ ಆಗಿರುವ ಅಂಕಿತ್ ಪಾಂಡಾ ಪ್ರತಿಕ್ರಿಯಿಸಿದ್ದಾರೆ.
ಈ ಪರೀಕ್ಷೆ ಕುರಿತು ಪ್ರತಿಕ್ರಿಯಿಸಿರುವ ಚೀನಾದ ರಕ್ಷಣಾ ಸಚಿವಾಲಯ, ‘ಸೇನೆ ವಾರ್ಷಿಕವಾಗಿ ಕೈಗೊಳ್ಳುವ ತರಬೇತಿಯಡಿ ಈ ಪರೀಕ್ಷೆ ನಡೆಸಲಾಗಿದೆ. ಅಂತರರಾಷ್ಟ್ರೀಯ ನಿಯಮದ ಪ್ರಕಾರವೇ ಈ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ದೇಶವನ್ನು ಗುರಿಯಾಗಿಸಿ ನಡೆಸಿದ್ದಲ್ಲ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.