ಹಾಂಗ್‌ಕಾಂಗ್: ಹಿಂದೂ ಮಹಾಸಾಗರದಲ್ಲಿ ಚೀನಾ ಕೈಗೊಂಡಿರುವ ವೈಜ್ಞಾನಿಕ ಸಂಶೋಧನೆಯನ್ನು ಕೆಲ ದೇಶಗಳಿಗೆ ಬೆದರಿಕೆ ಒಡ್ಡುವ ಸಲುವಾಗಿ ಬಳಸಲಾಗುತ್ತದೆ ಎಂಬ ಸುಳ್ಳು ವರದಿಯನ್ನು ಅಮೆರಿಕ ಚಿಂತಕರ ಚಾವಡಿ ಪ್ರಕಟಿಸಿದೆ ಎಂದು ಚೀನಾದ ಸರ್ಕಾರಿ ಒಡೆತನದ ಮಾಧ್ಯಮ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದೆ.
ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್ (ಸಿಎಸ್‌ಐಎಸ್) ಈ ಕುರಿತ ವರದಿಯನ್ನು ನೀಡಿದೆ. ಹಿಂದೂ ಮಹಾಸಾಗರ ಪ್ರದೇಶಕ್ಕೆ ಚೀನಾದಿಂದ ಬೆದರಿಕೆ ಇದೆ ಎಂದು ಸಾಬೀತುಪಡಿಸಲು ಕೆಲವು ದೇಶಗಳು ಯತ್ನಿಸುತ್ತಿದ್ದ ಸಂದರ್ಭದಲ್ಲಿಯೇ ಅವುಗಳಿಗೆ ಒಂದು ‘ಅಸ್ತ್ರ’ ಸಿಕ್ಕಂತಾಗಿದೆ’ ಎಂದು ‘ಗ್ಲೋಬಲ್ ಟೈಮ್ಸ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ.
ಇದೇ ವೇಳೆ, ‘ಯಾವುದೇ ಗುಪ್ತ ಕಾರ್ಯಸೂಚಿ ಇಲ್ಲದೆ ನೈಸರ್ಗಿಕ ಪರಿಸರವನ್ನು ಚೀನಾ ಮತ್ತು ಪ್ರಾದೇಶಿಕ ಪಾಲುದಾರ ರಾಷ್ಟ್ರಗಳು ಅಧ್ಯಯನ ನಡೆಸುತ್ತಿವೆ’ ಎಂದು ಅದು ಸಮರ್ಥಿಸಿಕೊಂಡಿದೆ.
ಸಮುದ್ರದ ಆಳ, ಪ್ರವಾಹ ಮತ್ತು ತಾಪಮಾನ ಕುರಿತ ವಿವರವಾದ ಮಾಹಿತಿಯು ಚೀನಾದ ಜಲಾಂತರ್ಗಾಮಿ ಕಾರ್ಯಾಚರಣೆಗಳಿಗೆ ಮಹತ್ವದ್ದಾಗಿದೆ. ವೈಜ್ಞಾನಿಕ ಮತ್ತು ವಾಣಿಜ್ಯ ಅನುಕೂಲದ ಜೊತೆಗೆ ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಾಬಲ್ಯ ಸಾಧಿಸಲೂ ಸಂಶೋಧನೆಯನ್ನು ಚೀನಾ ಬಳಕೆ ಮಾಡಿಕೊಳ್ಳಲಿದೆ ಎಂದು ಸಿಎಎಸ್‌ಐಎಸ್ ವರದಿಯಲ್ಲಿ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.