ಬೀಜಿಂಗ್: ‘ತೈವಾನ್ ಅನ್ನು ಚೀನಾದೊಂದಿಗೆ ಸೇರಿಸಲು ಸೇನೆ ಬಳಸುವ ಅವಕಾಶವನ್ನು ಕೈಬಿಡುವುದಿಲ್ಲ. ಆ ಮೂಲಕ ಚೀನಾದ ಏಕೀಕರಣ ಮಾಡುತ್ತೇವೆ’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭಾನುವಾರ ಪ್ರತಿಜ್ಞೆ ಮಾಡಿದರು.
ಚೀನಾದ ಕಮ್ಯುನಿಸ್ಟ್ ಪಕ್ಷದ 20ನೇ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ತೈವಾನ್ ಅನ್ನು ಚೀನಾದೊಂದಿಗೆ ಸೇರಿಸಿ, ಚೀನಾವನ್ನು ಒಂದುಗೂಡಿಸುವ ಕಾರ್ಯತಂತ್ರಕ್ಕೆ ಪಕ್ಷದ ಎಲ್ಲಾ ಸದಸ್ಯರು ಬದ್ಧರಾಗಿಬೇಕು’ ಎಂದರು. ಇಂತಹ ಸಮ್ಮೇಳನವುಐದು ವರ್ಷಕ್ಕೊಮ್ಮೆ ನಡೆಯುತ್ತದೆ.
ಜಿನ್‌ಪಿಂಗ್ ಅವರು ತೈವಾನ್ ಕುರಿತು ಪ್ರತಿಜ್ಞೆ ಮಾಡುತ್ತಿದ್ದಂತೆಯೇ, ಸಮ್ಮೇಳನದಲ್ಲಿ ಭಾಗವಹಿಸಿದ್ದ 2,300 ಚುನಾಯಿತ ಪ್ರತಿನಿಧಿಗಳು ಸುದೀರ್ಘ ಕರತಾಡನದ ಮೂಲಕ ತಮ್ಮ ನಾಯಕನೊಂದಿಗೆ ಸಹಮತ ವ್ಯಕ್ತಪಡಿಸಿದರು.
‘ಏಕೀಕರಣಕ್ಕಾಗಿ ಶಾಂತಿಯುತ ಮಾರ್ಗ ಅನುಸರಿಸುವುದನ್ನು ಚೀನಾ ಮುಂದುವರಿಸಲಿದೆ. ಆದರೆ, ಅದಕ್ಕಾಗಿ ಸೇನೆಯನ್ನು ಬಳಸುವುದಿಲ್ಲ ಎಂದು ನಾವು ಎಂದೂ ಹೇಳಿಲ್ಲ. ‘ತೈವಾನ್ ಸ್ವಾತಂತ್ರ್ಯ’ಕ್ಕಾಗಿ ಹವಣಿಸುತ್ತಿರುವ ಪ್ರತ್ಯೇಕತಾವಾದಿಗಳನ್ನು ಗುರಿಯಾಗಿಸುತ್ತೇವೆಯೇ ಹೊರತು ತೈವಾನ್‌ನಲ್ಲಿ ಇರುವ ನಮ್ಮ ನಾಗರಿಕ ಬಾಂಧವರನ್ನಲ್ಲ’ ಎಂದೂ ಹೇಳಿದ್ದಾರೆ.
ಸೇನೆ ಆಧುನೀಕರಣ: ಸೇನೆಯನ್ನು ಬಲಗೊಳಿಸುವ ಕುರಿತು ಮಾತನಾಡಿದ ಜಿನ್‌ಪಿಂಗ್, ದೇಶದ ಸಾರ್ವಭೌಮತ್ವದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸೇನೆಯನ್ನು ಜಗತ್ತಿನ ಅತ್ಯುನ್ನತ ಮಟ್ಟಕ್ಕೆ ಆಧುನಿಕಗೊಳಿಸುವುದಾಗಿ ಹೇಳಿದರು.
ಎದುರಾಳಿ ರಾಷ್ಟ್ರಗಳೊಂದಿಗೆ ಹೋರಾಡಿ ಗೆಲ್ಲುವ ಸಲುವಾಗಿ ಸೇನಾಪಡೆಗಳಿಗೆ ನೀಡುವ ತರಬೇತಿಯನ್ನು ಇನ್ನಷ್ಟು ತೀವ್ರಗೊಳಿಸಲು ಹಾಗೂ ಪ್ರಬಲ ವ್ಯೂಹಾತ್ಮಕ ಪ್ರತಿರೋಧ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಷಿ ಅವರು ತಮ್ಮ 63 ಪುಟಗಳ ವರದಿಯಲ್ಲಿ ತಿಳಿಸಿದ್ದಾರೆ.
‘ಚೀನಾ ಸೇನೆ ‘ಪೀಪಲ್ಸ್ ಲಿಬರೇಷನ್ ಆರ್ಮಿ’ಗೆ2027ಕ್ಕೆ ನೂರು ವರ್ಷ ತುಂಬಲಿದೆ. ಈ ವೇಳೆಗೆ ಸೇನೆಯನ್ನು ಇನ್ನಷ್ಟು ಬಲಗೊಳಿಸುವ ಕಾರ್ಯತಂತ್ರ ರೂಪಿಸಲಾಗುವುದು. ಸೆಂಟ್ರಲ್ ಮಿಲಿಟರಿ ಕಮಿಷನ್ (ಸಿಎಂಸಿ) ಮುಖ್ಯಸ್ಥನ ಬಳಿಯೇ ಎಲ್ಲಾ ಹೊಣೆಗಾರಿಕೆ ಇರುವಂತೆ ನೋಡಿಕೊಳ್ಳಲಾಗುವುದು’ ಎಂದರು. ಚೀನಾ ಅಧ್ಯಕ್ಷ ಷಿಜಿನ್‌ಪಿಂಗ್ ಅವರೇ ಸಿಎಂಸಿನ ಮುಖ್ಯಸ್ಥರಾಗಿದ್ದಾರೆ.
ಕ್ವಾಡ್: ಚೀನಾ ವಿರೋಧ
‘ಒಂದು ರಾಷ್ಟ್ರವನ್ನು ಗುರಿಯಾಗಿಸಿ ಅದರ ವಿರುದ್ಧ ಗುಂಪುಕಟ್ಟುವುದನ್ನು ಚೀನಾವು ತೀವ್ರವಾಗಿ ವಿರೋಧಿಸುತ್ತದೆ’ ಎಂದು ‘ಕ್ವಾಡ್‘ ಕೂಟವನ್ನು ಪರೋಕ್ಷವಾಗಿ ಉದ್ದೇಶಿಸಿ ಷಿ ಜಿನ್‌ಪಿಂಗ್ ಹೇಳಿದರು.
ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್ ದೇಶಗಳು ಸೇರಿ ಮಾಡಿಕೊಂಡಿವ ಕ್ವಾಡ್ ಕೂಟವನ್ನು ಚೀನಾವು ಹಿಂದಿನಿಂದಲೂ ವಿರೋಧಿಸುತ್ತಲೇ ಬಂದಿದೆ.ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಸೇನಾ ಚಟುವಟಿಕೆ ಹೆಚ್ಚಾಗಿದ್ದು, ಈ ಪ್ರದೇಶವನ್ನು ಮುಕ್ತವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಕೂಟವನ್ನು ರೂಪಿಸಲಾಗಿದೆ.
3ನೇ ಬಾರಿಗೆ ಅಧ್ಯಕ್ಷ ಸಾಧ್ಯತೆ
ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಷಿ ಜಿನ್‌ಪಿಂಗ್ ಅವರು ಮೂರನೇ ಬಾರಿಗೆ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ. 2018ರಲ್ಲಿನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ತಂದಿರುವ ಕಾರಣ ಷಿ ಹಾದಿ ಸುಗಮವಾಗಿದೆ.
ಆಡಳಿತದ ವಿರುದ್ಧ ಪ್ರತಿಭಟನೆ
ಪಕ್ಷದ ಸಮ್ಮೇಳನ ಆರಂಭವಾಗಿರುವಂತೆಯೇ ಕೋವಿಡ್ ಹರಡುವಿಕೆ ತಡೆಗಾಗಿ ಜಿನ್‌ಪಿಂಗ್ ಅವರು ಜಾರಿಗೆ ತಂದ ಕಠಿಣ ನಿಯಮಗಳನ್ನು ಖಂಡಿಸಿ ಜನರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಕಠಿಣ ನೀತಿಯಿಂದಾಗಿ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕತೆಯ ಪ್ರಗತಿ ಕುಂಠಿತಗೊಂಡಿದೆ ಎಂದು ಜನರು ಅಸಮಾಧಾನಗೊಂಡಿದ್ದಾರೆ.
‘ಆಹಾರ ಬೇಕು; ಕೋವಿಡ್ ಪರೀಕ್ಷೆಯಲ್ಲ, ಸುಧಾರಣೆ ಬೇಕು; ಸಾಂಸ್ಕೃತಿಕ ಕ್ರಾಂತಿಯಲ್ಲ, ಸ್ವಾತಂತ್ರ್ಯಬೇಕು; ಲಾಕ್‌ಡೌನ್ ಅಲ್ಲ, ಮತದಾರರು ಬೇಕು; ನಾಯಕರಲ್ಲ, ಘನತೆ ಬೇಕು; ಸುಳ್ಳುಗಳಲ್ಲ, ನಾಗರಿಕರು ಬೇಕು; ಗುಲಾಮರಲ್ಲ’ ಎಂದು ಚೀನಾದ ಹೈಡಾನ್ ಜಿಲ್ಲೆಯ ಸೇತುವೆಯೊಂದರ ಮೇಲೆ ಕಟ್ಟಿದ ಬ್ಯಾನರ್‌ನಲ್ಲಿ ಬರೆಯಲಾಗಿತ್ತು. ಈ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.