ADVERTISEMENT

ಭಾರತದ ಗಡಿಯುದ್ಧಕ್ಕೂ ಸೇನೆ ನಿಯೋಜನೆ ಹೆಚ್ಚಿಸಿದ ಚೀನಾ

ಭಾರತದ ಗಡಿಯುದ್ಧಕ್ಕೂ ಹೆಚ್ಚಿನ ಕಾರ್ಯಚಟುವಟಿಕೆ –ಅಮೆರಿಕದ ರಕ್ಷಣಾ ಇಲಾಖೆ ವರದಿಯಲ್ಲಿ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 14:13 IST
Last Updated 22 ಅಕ್ಟೋಬರ್ 2023, 14:13 IST
 ಚೀನಾ, ಭಾರತ ಬಾವುಟ
ಚೀನಾ, ಭಾರತ ಬಾವುಟ   

ವಾಷಿಂಗ್ಟನ್‌ (ಪಿಟಿಐ): ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿರುವಂತೆಯೇ, ಪ್ಯಾಂಗಾಂಗ್‌ ಸರೋವರದ 2ನೇ ಸೇತುವೆ ಸಮೀಪ, ಡೋಕ್ಲಾನಲ್ಲಿ ಸೇನೆ ನಿಯೋಜಿಸುವ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾರ್ಯವನ್ನು ಚೀನಾ ಮತ್ತಷ್ಟು ಚುರುಕುಗೊಳಿಸಿದೆ.

ಅಮೆರಿಕದ ರಕ್ಷಣಾ ಇಲಾಖೆಯು ಇಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ. ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾದ ಸೇನೆಯ ನಡುವೆ ಮೂರು ವರ್ಷದ ಹಿಂದೆ ಸಂಘರ್ಷ ಉಂಟಾದ ಬಳಿಕ ಉದ್ವಿಗ್ವ ಸ್ಥಿತಿ ಮೂಡಿದೆ.

ಅಮೆರಿಕ ಬಿಡುಗಡೆ ಮಾಡಿದ ‘ಚೀನಾದ ಸೇನೆ ಮತ್ತು ಭದ್ರತಾ ಪ್ರಗತಿ ವರದಿ-2023ರ ವರದಿಯಲ್ಲಿ, ‘ಭಾರತ ಮತ್ತು ಚೀನಾ ಗಡಿಯಲ್ಲಿ 2020ರಿಂದಲೂ ಉದ್ವಿಗ್ನ ಪರಿಸ್ಥಿತಿ ಇದೆ. ಅದರ ನಡುವೆಯೂ ಚೀನಾ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಮುಂದುವರಿಸಿದೆ’ ಎಂದು ಹೇಳಿದೆ.

ADVERTISEMENT

ಚೀನಾವು ಅಭಿವೃದ್ಧಿ ಪಡಿಸುತ್ತಿರುವ ಮೂಲಸೌಕರ್ಯಗಳಲ್ಲಿ ಡೋಕ್ಲಾಮ್‌ ಬಳಿ ಭೂಮಿಯೊಳಗಿನ ದಾಸ್ತಾನು ಸೌಲಭ್ಯ, ವಾಸ್ತವ ಗಡಿ ರೇಖೆಯುದ್ದಕ್ಕೂ ಮೂರು ವಲಯದಲ್ಲಿ ಹೊಸದಾಗಿ ರಸ್ತೆಗಳ ಅಭಿವೃದ್ಧಿ, ನೆರೆಯ ಭೂತಾನ್‌ಗೆ ಹೊಂದಿಕೊಂಡಿರುವಂತೆ ವಿವಾದಿತ ಪ್ರದೇಶಗಳಲ್ಲಿ ಹೊಸ ಗ್ರಾಮಗಳ ಅಭಿವೃದ್ಧಿ, ಪ್ಯಾಂಗಾಂಗ್‌ ಸರೋವರಕ್ಕೆ ಎರಡನೇ ಸೇತುವೆ ನಿರ್ಮಾಣ ಕಾರ್ಯ, ಸೆಂಟರ್‌ ಸೆಕ್ಟರ್‌ನ ಬಳಿ ಬಹುಪಯೋಗಿ ವಿಮಾನನಿಲ್ದಾಣ ಹಾಗೂ ಹೆಲಿಪ್ಯಾಡ್‌ಗಳ ಅಭಿವೃದ್ಧಿ ಚಟುವಟಿಕೆಗಳು ಸೇರಿದೆ ಎಂದು ವಿವರಿಸಿದೆ.

ಅಲ್ಲದೆ, ಸೇನೆಯ ಒಂದು ತುಕಡಿ ಹಾಗೂ ಇದಕ್ಕೆನೆರವಾಗುವಂತೆ ಕ್ಸಿಂಜಿಯಾಂಗ್ ಮತ್ತು ಟಿಬೆಟ್‌ ಸೇನಾ ಜಿಲ್ಲೆಗಳ ಎರಡು ತುಕಡಿಗಳನ್ನೂ ವಾಸ್ತವ ಗಡಿ ರೇಖೆಗೆ ಹೊಂದಿಕೊಂಡಂತೆ ಪಶ್ಚಿಮ ವಲಯ ಮತ್ತು ಮೀಸಲು ಪ್ರದೇಶಗಳಲ್ಲಿ ನಿಯೋಜಿಸಿದೆ ಎಂದು ವಿವರಿಸಿದೆ.

‘ಚೀನಾ ಸೇನೆಯು ಪ್ರಸ್ತುತ ಬಳಕೆ ಮಾಡಬಹುದಾದ 500ಕ್ಕೂ ಹೆಚ್ಚು ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿದೆ. 2030ರ ವೇಳೆಗೆ ಇವುಗಳ ಸಂಖ್ಯೆಯು 1000 ಮೀರಬಹುದು ಎಂಬ ಅಂಶವನ್ನು ವರದಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.  

ಅಲ್ಲದೆ, ಗಾಲ್ವಾನ್‌ ಕಣಿವೆಯಲ್ಲಿ ನಡೆದಿದ್ದ ಘರ್ಷಣೆ  45 ವರ್ಷಗಳಲ್ಲಿಯೇ ನಡೆದ ಹೆಚ್ಚು ಹಿಂಸಾತ್ಮಕ ಸಂಘರ್ಷವಾಗಿತ್ತು. ಆ ನಂತರದಲ್ಲಿ ಚೀನಾ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಹೆಚ್ಚಿನ ತುಕಡಿಗಳನ್ನು ನಿಯೋಜನೆ ಮಾಡಿದೆ ಎಂದು ವರದಿ ವಿವರಿಸಿದೆ.

2020ರ ಜೂನ್‌ 15ರಂದು ಗಾಲ್ವಾನ್‌ ಕಣಿವೆಯಲ್ಲಿ ನಡೆದಿದ್ದ ಘರ್ಷಣೆಯು ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಮೇಲೂ ಪರಿಣಾಮ ಬೀರಿದೆ. ಉಭಯ ದೇಶಗಳ ನಡುವಿನ ಮಾತುಕತೆಯೂ ಮಂದಗತಿಯಲ್ಲಿ ಸಾಗಿದೆ ಎಂದು ತಿಳಿಸಿದೆ.

ಗಡಿ ರೇಖೆಯುದ್ದಕ್ಕೂ ಸಹಜ ಹಾಗೂ ಶಾಂತವಾದ ಪರಿಸ್ಥಿತಿ ಮರಳದೇ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯವು ಉತ್ತಮಗೊಳ್ಳುವುದು ಅಸಾಧ್ಯ ಎಂಬ ನಿಲುವಿಗೆ ಭಾರತವು ಬದ್ಧವಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.