ADVERTISEMENT

ಚೀನಾ: ಎಚ್‌3ಎನ್‌8 ಹಕ್ಕಿಜ್ವರದಿಂದ ಮೊದಲ ಸಾವು– ಡಬ್ಲ್ಯುಎಚ್‌ಒ

ರಾಯಿಟರ್ಸ್
Published 12 ಏಪ್ರಿಲ್ 2023, 12:49 IST
Last Updated 12 ಏಪ್ರಿಲ್ 2023, 12:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್: ‘ಎಚ್‌3ಎನ್‌8 ಅಪರೂಪದ ಹಕ್ಕಿಜ್ವರದಿಂದಾಗಿ ಚೀನಾದಲ್ಲಿ ಮಹಿಳೆಯೊಬ್ಬರು ಸಾವಿಗೀಡಾದ ಮೊದಲ ಪ್ರಕರಣ ವರದಿಯಾಗಿದೆ’ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತಿಳಿಸಿದೆ.

‘ಸಾವಿಗೀಡಾದ ಮಹಿಳೆ ಗುವಾಂಗ್‌ಡಾಂಗ್‌ನ ದಕ್ಷಿಣಪ್ರಾಂತ್ಯದ ನಿವಾಸಿಯಾಗಿದ್ದರು. ಏವಿಯನ್ ಇನ್‌ಫ್ಲುಯೆಂಜಾದ ಉಪತಳಿ ಎಚ್‌3ಎನ್‌8 ಹಕ್ಕಿಜ್ವರ ಸೋಂಕು ಕಾಣಿಸಿಕೊಂಡ ಮೂರನೇ ವ್ಯಕ್ತಿ ಇವರಾಗಿದ್ದರು. ಮಹಿಳೆಯು ಕೋಳಿಸಾಕಣೆಯ ಕೇಂದ್ರದ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇದೆ’ಎಂದೂ ಮಾಹಿತಿ ನೀಡಿದೆ.

‘ಎಚ್‌3ಎನ್‌8 ಸೋಂಕು ಹಕ್ಕಿಗಳಲ್ಲಿ ಸಾಮಾನ್ಯವಾಗಿದ್ದು, ಇದು ಮನುಷ್ಯರಲ್ಲಿ ಕಂಡುಬರುವುದು ಅಪರೂಪ. ಈ ಹಕ್ಕಿಜ್ವರವು ಯಾವುದೇ ರೋಗಲಕ್ಷಣವನ್ನು ಹೊಂದಿರುವುದಿಲ್ಲ. ಸೋಂಕಿತ ಮಹಿಳೆಯ ನಿಕಟ ಸಂಪರ್ಕ ಬಂದವರಲ್ಲೂ ಈ ಸೋಂಕು ಕಂಡುಬಂದಿಲ್ಲ. ಈ ವೈರಸ್ ಮನುಷ್ಯರಿಗೆ ಸುಲಭವಾಗಿ ಹಬ್ಬುವ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ ಮನುಷ್ಯರಲ್ಲಿ ಹಬ್ಬುವ ಅಪಾಯದ ಪ್ರಮಾಣವು ಕಡಿಮೆ’ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ADVERTISEMENT

ಗುವಾಂಗ್‌ಡಾಂಗ್ ಪ್ರಾಂತೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಕಳೆದ ತಿಂಗಳು ಹಕ್ಕಿಜ್ವರದ ಮೂರನೇ ಪ್ರಕರಣವನ್ನು ಪತ್ತೆ ಹಚ್ಚಿತ್ತು. ಆದರೆ ಸಾವಿಗೀಡಾದ ಮಹಿಳೆಯ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಹಕ್ಕಿಜ್ವರದ ಮೂರೂ ಪ್ರಕರಣಗಳು ಚೀನಾದಲ್ಲಿ ವರದಿಯಾಗಿದ್ದು, ಈ ಪೈಕಿ ಎರಡು ಪ್ರಕರಣಗಳು ಕಳೆದ ವರ್ಷ ವರದಿಯಾಗಿದ್ದವು. ಚೀನಾದಲ್ಲಿ ಕೋಳಿಸಾಕಣೆ ಕೇಂದ್ರಗಳು ಹಾಗೂ ಹಕ್ಕಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ನಿರಂತರವಾಗಿ ಹಕ್ಕಿಜ್ವರದ ಪ್ರಕರಣಗಳು ವರದಿಯಾಗುತ್ತಿವೆ.

ಮಹಿಳೆಯು ಅನಾರೋಗ್ಯಕ್ಕೀಡಾಗುವ ಮುನ್ನ ಭೇಟಿ ಕೊಟ್ಟಿದ್ದ ಮಾಂಸ ಮಾರುಕಟ್ಟೆಯಿಂದ ಮಾದರಿ ಸಂಗ್ರಹಿಸಲಾಗಿದೆ. ಮಹಿಳೆಯಲ್ಲಿ ಇನ್‌ಫ್ಲುಯೆಂಜಾ ಎ (ಎಚ್‌3) ಸೋಂಕು ಪತ್ತೆಯಾಗಿದ್ದು, ಅದುವೇ ಸೋಂಕಿನ ಮೂಲವಾಗಿರಬಹುದು ಎಂದು ಡಬ್ಲ್ಯುಎಚ್‌ಒ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.