ADVERTISEMENT

ಚೀನಾ: ಹ್ಯುಬೆಯಲ್ಲಿ ನಿರ್ಬಂಧ ತೆರವು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 19:45 IST
Last Updated 24 ಮಾರ್ಚ್ 2020, 19:45 IST

ಬೀಜಿಂಗ್/ವುಹಾನ್ (ಪಿಟಿಐ): ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿರುವ ಚೀನಾದ ಹ್ಯುಬೆ ಪ್ರಾಂತ್ಯದಲ್ಲಿ 5.60 ಕೋಟಿಗೂ ಹೆಚ್ಚು ಜನರ ಮೇಲೆ ಮೂರು ತಿಂಗಳಿಂದ ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಬುಧವಾರ ತೆರವುಗೊಳಿಸಲು ಸರ್ಕಾರ ನಿರ್ಧರಿಸಿದೆ.

ಕೋವಿಡ್-19 ಜಾಗತಿಕ ಪಿಡುಗಾಗಿ ಪರಿಣಮಿಸಿದ್ದು, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಜಗತ್ತಿನ ಹಲವೆಡೆ ಲಾಕ್ ಡೌನ್ ಮಾಡುವ ಸ್ಥಿತಿ ಎದುರಾಗಿರುವ ಹೊತ್ತಿನಲ್ಲಿಯೇ, ಕೊರೊನಾ ವೈರಸ್ ಸೋಂಕಿನ ಕೇಂದ್ರ ಸ್ಥಾನಗಳಲ್ಲಿ ಲಾಕ್ ಡೌನ್ ತೆರವುಗೊಳಿಸುವ ಮಹತ್ವದ ನಿರ್ಣಯವನ್ನು ಚೀನಾ ಕೈಗೊಂಡಿದೆ.

ಹ್ಯುಬೆ ರಾಜಧಾನಿ ವುಹಾನ್‌ನಲ್ಲಿ ಏಪ್ರಿಲ್ 8ರಂದು ಲಾಕ್ ಡೌನ್ ಕೊನೆಯಾಗಲಿದೆ.

ADVERTISEMENT

ಜ.23ರಿಂದ ಇಡೀ ಪ್ರಾಂತ್ಯದಲ್ಲಿ ಎಲ್ಲರನ್ನೂ ಕಟ್ಟುನಿಟ್ಟಾಗಿ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಜನಸಂಚಾರ ಹಾಗೂ ವಾಹನ ಸಂಚಾರಗಳ ಮೇಲೆ ನಿರ್ಬಂಧ ವಿಧಿಸಲಾಗಿತ್ತು.1.10 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ವುಹಾನ್‌ನಲ್ಲಿ ಸತತ ಐದು ದಿನಗಳ ಕಾಲ ಯಾವುದೇ ಸೋಂಕು ಪ್ರಕರಣ ಇರಲಿಲ್ಲ. ಸೋಮವಾರ ಹೊಸದಾಗಿ ಸೋಂಕು ದೃಢಪಟ್ಟ ಒಂದು ಪ್ರಕರಣ ವರದಿಯಾಗಿದೆ.

ಕಳೆದ ಡಿಸೆಂಬರ್ ಅಂತ್ಯದಲ್ಲಿ ಮೊದಲ ವೈರಸ್ ಸೋಂಕು ಪ್ರಕರಣ ಇಲ್ಲಿ ವರದಿಯಾಗಿತ್ತು.

‘ವುಹಾನ್‌ನಲ್ಲಿ ಕೋವಿಡ್-19 ಪಿಡುಗಿಗೆ ಗುರಿಯಾದವರ ಅಥವಾ ಕೊರೊನಾ ಸೋಂಕು ಶಂಕಿತರ ಜತೆ ಯಾವುದೇ ಸಂಪರ್ಕ ಹೊಂದಿಲ್ಲದೆ ಇರುವವರಿಗೆ ಹಸಿರು ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ಅಂತಹವರಿಗೆ ವುಹಾನ್ ನಗರ ಹಾಗೂ ಹ್ಯುಬೆ ಪ್ರಾಂತ್ಯ ದಿಂದ ಹೊರಗೆ ಸಂಚರಿಸಲು ಅವಕಾಶ ನೀಡಲಾಗುತ್ತದೆ’ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.