ಬೀಜಿಂಗ್: ಟೆಸ್ಲಾ ಸಂಸ್ಥಾಪಕ ಎಲೊನ್ ಮಸ್ಕ್ ನೇತೃತ್ವದ ಮಹತ್ವಾಕಾಂಕ್ಷಿ ಸ್ಟಾರ್‌ಲಿಂಕ್ ಇಂಟರ್‌ನೆಟ್ ಯೋಜನೆಯಿಂದ ಉಡಾವಣೆಯಾದ ಉಪಗ್ರಹಗಳೊಂದಿಗೆ ಡಿಕ್ಕಿ ಭೀತಿಯನ್ನು ತಪ್ಪಿಸಲು ತನ್ನ ಬಾಹ್ಯಾಕಾಶ ಕೇಂದ್ರದಲ್ಲಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಚೀನಾ ಹೇಳಿದೆ.
ಎಲಾನ್ ಮಸ್ಕ್ ಸ್ಥಾಪಿಸಿರುವ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಸಂಸ್ಥೆ, ಇತ್ತೀಚೆಗಷ್ಟೇ ಇಂಟರ್‌ನೆಟ್ ಸೇವಾ ಸಂಬಂಧಿ ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಉಡಾವಣೆಗೊಳಿಸಿತ್ತು.
ಸ್ಟಾರ್‌ಲಿಂಕ್ ಉಪಗ್ರಹಗಳು, ಚೀನಾದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಮೀಪದಲ್ಲಿಯೇ ಹಾದು ಹೋಗಿದೆ ಎಂದು ಚೀನಾ ದೂರಿದೆ.
ಈ ತಿಂಗಳ ಆರಂಭದಲ್ಲಿ ಚೀನಾವು ವಿಶ್ವಸಂಸ್ಥೆಯ ಬಾಹ್ಯಾಕಾಶ ವ್ಯವಹಾರಗಳ ಕಚೇರಿಗೆ ಸಲ್ಲಿಸಿದ ದಾಖಲೆಯಲ್ಲಿ ಈ ಕುರಿತು ಉಲ್ಲೇಖಿಸಿದೆ. ಎಲೊನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕಂಪನಿಯ ಭಾಗವಾದ ಸ್ಟಾರ್‌ಲಿಂಕ್ ಇಂಟರ್‌ನೆಟ್ ಸೇವೆಗಳ ಉಪಗ್ರಹಗಳು ಚೀನಾದ ಬಾಹ್ಯಾಕಾಶ ನಿಲ್ದಾಣದ ಸಮೀಪ ಎರಡು ಬಾರಿ (ಜು.1 ಹಾಗೂ ಅ.21) ಹಾದು ಹೋಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಸುರಕ್ಷತೆಯ ದೃಷ್ಟಿಯಿಂದ ಎರಡು ಬಾಹ್ಯಾಕಾಶ ನೌಕೆಗಳ ನಡುವಣ ಸಂಭಾವ್ಯ ಘರ್ಷಣೆಯನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಚೀನಾ ಹೇಳಿದೆ.
ಸ್ಪೇಸ್ ಎಕ್ಸ್ ಈಗಾಗಲೇ ಸ್ಟಾರ್‌ಲಿಂಕ್ ಜಾಲದ ಭಾಗವಾಗಿ 1,900 ಉಪಗ್ರಹಗಳನ್ನು ಉಡಾವಣೆ ಮಾಡಿದೆ.ಅತ್ತ ಚೀನಾ, ಮುಂದಿನ ವರ್ಷದ ಅಂತ್ಯದ ವೇಳೆಗೆ ಬಾಹ್ಯಾಕಾಶ ನಿಲ್ದಾಣ ನಿರ್ಮಾಣವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.