ಬೀಜಿಂಗ್: ಇಂಗ್ಲೆಂಡ್‌ನಲ್ಲಿ ನಡೆದ ‘ಜಿ7 ರಾಷ್ಟ್ರಗಳ ಶೃಂಗಸಭೆ‘ಯಲ್ಲಿ ಷಿನ್‌ಜಿಯಾಂಗ್ ಮತ್ತು ಹಾಂಗ್‌ಕಾಂಗ್ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ವಿವಿಧ ರಾಷ್ಟ್ರಗಳ ನಾಯಕರು ತಮ್ಮ ದೇಶದ ವಿರುದ್ಧ ಮಾಡಿರುವ ಟೀಕೆಗೆ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಬ್ರಿಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಈ ರಾಷ್ಟ್ರಗಳು ಚೀನಾದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿವೆ‘ ಎಂದು ದೂರಿದೆ.
‘ಈ ಆರೋಪಗಳಲ್ಲಿ ಹುರುಳಿಲ್ಲ. ಷಿನ್‌ಜಿಯಾಂಗ್ ಸಂಬಂಧಿಸಿದ ಬೆಳವಣಿಗೆಗಳನ್ನೇ ಲಾಭವನ್ನಾಗಿಸಿ ಕೊಳ್ಳುತ್ತಿರುವ ರಾಷ್ಟ್ರಗಳು, ಆ ಮೂಲಕ ಚೀನಾದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದನ್ನು ನಾವು ದೃಢವಾಗಿ ವಿರೋಧಿಸುತ್ತೇವೆ‘ ಎಂದು ರಾಯಭಾರ ಕಚೇರಿಯ ವಕ್ತಾರರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ಈ ಎಲ್ಲ ಹೇಳಿಕೆಗಳು ಸುಳ್ಳು ಮತ್ತು ಆಧಾರ ರಹಿತ ಆರೋಪ‘ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಡುವವರನ್ನು ಹಾಗೂ ಷಿನ್‌ಜಿಯಾಂಗ್ ಪ್ರದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ರಾಷ್ಟ್ರಗಳ ನಾಯಕರು ಚೀನಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ‘ಈ ವಿಷಯದಲ್ಲಿ ಚೀನಾ ಮಾನವ ಹಕ್ಕುಗಳ ರಕ್ಷಣೆ ಕುರಿತು ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತಾ, ಇನ್ನಷ್ಟು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಲು ಪ್ರಾರಂಭಿಸಬೇಕು‘ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.