ಬೀಜಿಂಗ್: ತೀವ್ರ ಆರ್ಥಿಕ ಕುಸಿತವನ್ನು ಹಿಮ್ಮೆಟ್ಟಿಸಲು ಆಡಳಿತಾರೂಢ ಕಮ್ಯುನಿಸ್ಟ್ ಸರ್ಕಾರವು ಕೋವಿಡ್–19 ಮಾರ್ಗದರ್ಶಿ ನಿಯಮಗಳನ್ನು ಸಡಿಲಿಸಿದ ಬೆನ್ನಲ್ಲೇ, ಚೀನಾದ ಶಾಲೆಗಳು ಮತ್ತು ವಾಣಿಜ್ಯ ಚಟುವಟಿಕೆಯ ಸ್ಥಳಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಶುಕ್ರವಾರ ಸಾಮಾಜಿಕ ಮಾಧ್ಯಮ ಬಳಕೆದಾರರು ವರದಿ ಮಾಡಿದ್ದಾರೆ.
ಆದರೆ, ಸರ್ಕಾರದ ಅಧಿಕೃತದ ಅಂಕಿಅಂಶಗಳ ಪ್ರಕಾರ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಅದರಲ್ಲೂ ಜನಸಂಖ್ಯೆ ಹೆಚ್ಚಿರುವ ದೊಡ್ಡ ಭಾಗಗಳಲ್ಲಿ ಬುಧವಾರವಷ್ಟೇ ಸರ್ಕಾರ ಜನರಿಗೆ ಕೋವಿಡ್ ಕಡ್ಡಾಯ ಪರೀಕ್ಷೆಯ ನಿರ್ಬಂಧವನ್ನು ಸಡಿಲಿಸಿದ್ದು, ಇಲ್ಲಿ ಪ್ರಕರಣಗಳು ವರದಿಯಾಗಿಲ್ಲ ಎನ್ನಲಾಗಿದೆ.
ಬೀಜಿಂಗ್ ಮತ್ತು ಇತರ ನಗರಗಳಲ್ಲಿ ತಮ್ಮ ಶಾಲಾ–ಕಾಲೇಜು ಸಹಪಾಠಿಗಳು ಹಾಗೂ ಕಚೇರಿಗಳಲ್ಲಿ ಸಹೋದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯಪೀಡಿತರಾಗುತ್ತಿದ್ದು, ಗೈರುಹಾಜರಾಗುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಕೆಲವೆಡೆ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.
ಬಳಕೆದಾರರಲ್ಲಿ ಇದುವರೆಗೆ ಯಾರೊಬ್ಬರೂ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಅಧಿಕೃತವಾಗಿ ತಿಳಿಸಿಲ್ಲ ಎನ್ನಲಾಗಿದೆ.
ಕೋವಿಡ್‌ನ ಕಠಿಣ ಮಾರ್ಗದರ್ಶಿ ನಿಯಮಗಳ ಕಾರಣಕ್ಕಾಗಿ ಸರ್ಕಾರವು ಲಕ್ಷಾಂತರ ಜನರನ್ನು ಮನೆಯಿಂದ ಹೊರಬರದಂತೆ ನಿರ್ಬಂಧ ವಿಧಿಸಿತ್ತು. ಇದರಿಂದ ಚೀನಾದಾದ್ಯಂತ ಅಧ್ಯಕ್ಷ ಷಿ ಜಿನ್‌ಪಿಂಗ್ ರಾಜೀನಾಮೆಗೆ ಆಗ್ರಹಿಸಿದ ಪ್ರತಿಭಟನೆ ನಡೆದಿತ್ತು. ಅಲ್ಲದೇ ನಿರ್ಬಂಧ ಸಡಿಲಿಕೆಯ ಬೇಡಿಕೆಗಳನ್ನು ಪ್ರತಿಭಟನಕಾರರು ಇಟ್ಟಿದ್ದರು. ಆರ್ಥಿಕ ಹಿನ್ನೆಡೆಯನ್ನು ಮನಗಂಡಿದ್ದ ಸರ್ಕಾರವು ನ. 11ರ ಬಳಿಕ ಹಂತಹಂತವಾಗಿ ನಿರ್ಬಂಧಗಳನ್ನು ತೆರವುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.