ADVERTISEMENT

ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಅಮೆರಿಕಕ್ಕೆ ಚೀನಾ ಎಚ್ಚರಿಕೆ

ಏಜೆನ್ಸೀಸ್
Published 24 ಮಾರ್ಚ್ 2023, 11:24 IST
Last Updated 24 ಮಾರ್ಚ್ 2023, 11:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಂಕಾಕ್‌: ಅಮೆರಿಕದ ಯುದ್ಧನೌಕೆಯು ದಕ್ಷಿಣ ಚೀನಾ ಸಮುದ್ರದ ವಿವಾದಿತ ಪಾರಾಸೆಲ್‌ ದ್ವೀಪದಲ್ಲಿ ವಿಹರಿಸಿದ ಬೆನ್ನಲ್ಲೇ ‘ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಚೀನಾ ಎಚ್ಚರಿಕೆ ನೀಡಿದೆ. ಹಾಗೆಯೇ ಇದು ದೇಶದ ಭದ್ರತೆ ಮತ್ತು ಸಾರ್ವಭೌಮತ್ವದ ಉಲ್ಲಂಘನೆ ಎಂದು ಆರೋಪಿಸಿದೆ.

ಈ ಪ್ರದೇಶದಲ್ಲಿ ಚೀನಾ–ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಈ ಎಚ್ಚರಿಕೆ ನೀಡಿದೆ.

ಗುರುವಾರ ಅಮೆರಿಕದ ‘ಯುಎಸ್ಎಸ್‌ ಮಿಲಿಯಸ್‌’ ನಿರ್ದೇಶಿತ ಕ್ಷಿಪಣಿ ವಿಧ್ವಂಸಕ ನೌಕೆಯು ಪಾರಾಸೆಲ್‌ ದ್ವೀಪದಲ್ಲಿ ಸಂಚರಿಸಿತ್ತು. ಚೀನಾ ನೌಕಾಪಡೆ ಮತ್ತು ವಾಯುಪಡೆಗಳು ಅದನ್ನು ದೂರ ಅಟ್ಟಿದವು ಎಂದು ಚೀನಾ ಆರೋಪಿಸಿದೆ. ಆದರೆ ಅಮೆರಿಕ ಸೇನೆಯು ಈ ಆರೋಪವನ್ನು ಅಲ್ಲಗಳೆದಿದೆ.

ADVERTISEMENT

‘ಅಮೆರಿಕ ಸೇನೆಯ ಕೃತ್ಯವು ಚೀನಾದ ಸಾರ್ವಭೌಮತೆ, ಭದ್ರತೆ ಹಾಗೂ ಹಲವಾರು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಅಲ್ಲದೆ, ಅಮೆರಿಕವು ದಕ್ಷಿಣ ಚೀನಾ ಸಮುದ್ರದ ಮೇಲೆ ಪ್ರಾಬಲ್ಯ ಸಾಧಿಸಲು ಯತ್ನಿಸುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಅಮೆರಿಕ ಕೂಡಲೇ ಇಂಥ ಪ್ರಚೋದನೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅನಿರೀಕ್ಷಿತ ಘಟನೆಗಳ ‘ಗಂಭೀರ ಪರಿಣಾಮ’ ಎದುರಿಸಬೇಕಾಗುತ್ತದೆ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ತಾನ್‌ ಕೆಫೈ ಎಚ್ಚರಿಸಿದ್ದಾರೆ.

ಈ ದ್ವೀಪವನ್ನು ಚೀನಾ ವಶಪಡಿಸಿಕೊಂಡಿದೆ. ಆದರೆ ತೈವಾನ್‌ ಮತ್ತು ವಿಯೆಟ್ನಾಂ ದೇಶಗಳೂ ತಮ್ಮ ದ್ವೀಪವೆಂದು ವಾದಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.