ಬೀಜಿಂಗ್: ತೈವಾನ್ ದ್ವೀಪದ ಸುತ್ತಲೂ ಸೇನಾ ತಾಲೀಮು ನಡೆಸುತ್ತಿರುವ ಚೀನಾ, ಸ್ವಯಂ ಆಡಳಿತವಿರುವ ಈ ದ್ವೀಪ ರಾಷ್ಟ್ರದ ಮೇಲೆ ಯುದ್ಧ ನಡೆಸುವುದಾಗಿ ಶುಕ್ರವಾರ ಎಚ್ಚರಿಕೆ ನೀಡಿದೆ.
ತೈವಾನ್ ಅನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಪುನರ್ ಏಕೀಕರಣಗೊಳಿಸುವ ಕಾರ್ಯವನ್ನು ಸಾಧಿಸುವವರೆಗೂ ಪ್ರತಿರೋಧದ ಕ್ರಮಗಳನ್ನು ತೀವ್ರಗೊಳಿಸುವುದಾಗಿ ಚೀನಿ ಪಡೆಗಳು ಎಚ್ಚರಿಕೆ ನೀಡಿವೆ.
ಲಾಯ್ ಚಿಂಗ್-ಟೆ ಅವರು ತೈವಾನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೂರು ದಿನಗಳ ನಂತರ ಚೀನಾ ಸೇನೆ ಯುದ್ಧ ತಾಲೀಮು ಪ್ರಾರಂಭಿಸಿತು. ತೈವಾನ್ ಅಧ್ಯಕ್ಷರ ಭಾಷಣವನ್ನು ‘ಇದು ಸ್ವಾತಂತ್ರ್ಯದ ತಪ್ಪೊಪ್ಪಿಗೆ’ ಎಂದು ಚೀನಾ ಖಂಡಿಸಿತು.
ಚೀನಾ ಸೇನೆ ಎರಡು ದಿನಗಳ ಯುದ್ಧ ತಾಲೀಮನ್ನು ಗುರುವಾರ ಬೆಳಿಗ್ಗೆಯೇ ಪ್ರಾರಂಭಿಸಿತ್ತು. ಚೀನಾದ ಯುದ್ಧ ನೌಕೆಗಳು ಮತ್ತು ಸೇನಾ ವಿಮಾನಗಳು ಪ್ರಜಾಪ್ರಭುತ್ವ ರಾಷ್ಟ್ರ ತೈವಾನ್ ಅನ್ನು ಸುತ್ತುವರೆದಿವೆ. ದ್ವೀಪರಾಷ್ಟ್ರದ ‘ಸ್ವತಂತ್ರ ಪಡೆಗಳ’ ರಕ್ತ ಹರಿಸುವ ಪ್ರತಿಜ್ಞೆಯನ್ನು ಮಾಡಿದೆ.
ಎರಡನೇ ದಿನದ ತಾಲೀಮಿನ ವೇಳೆ ಶುಕ್ರವಾರ ಚೀನಿ ಯುದ್ಧನೌಕೆಗಳು ಮತ್ತು ಯುದ್ಧ ವಿಮಾನಗಳು ತೈವಾನ್ ಅನ್ನು ಸಂಪೂರ್ಣ ಸುತ್ತುವರಿದವು. ಇದು ದ್ವೀಪವನ್ನು ವಶಪಡಿಸಿಕೊಳ್ಳುವ ನಮ್ಮ ಸಾಮರ್ಥ್ಯದ ಪರೀಕ್ಷೆ ಎಂದು ಚೀನಾ ಹೇಳಿದೆ.
‘ಮದ್ದುಗುಂಡು, ಶಸ್ತಾಸ್ತ್ರಗಳನ್ನು ತುಂಬಿದ ಯುದ್ಧ ವಿಮಾನಗಳು ನಮ್ಮ ಗುರಿಗಳ ಕಡೆಗೆ ಹಾರಿದವು. ಪ್ರಮುಖ ಗುರಿಗಳ ಮೇಲೆ ಯುದ್ಧನೌಕೆಗಳೊಂದಿಗೆ ಸಂಯೋಜಿತ ದಾಳಿ ನಡೆಸಲು ಬಾಂಬರ್ ವಿಮಾನಗಳು ಹೊರಟವು’ ಎಂದು ದೇಶದ ಸರ್ಕಾರಿ ವಾಹಿನಿ ‘ಸಿಸಿಟಿವಿ’ ವರದಿ ಮಾಡಿದೆ.
ಚೀನಿ ಸೇನೆಯು ತೈವಾನ್‌ನ ಪ್ರಮುಖ ದ್ವೀಪದಿಂದ 24 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದೆ. ನಾಲ್ಕು ಚೀನಿ ಹಡಗುಗಳು ತೈವಾನ್‌ನ ಎರಡು ದ್ವೀಪಗಳ ‘ನಿರ್ಬಂಧಿತ ಜಲ’ ಪ್ರದೇಶವನ್ನು ಶುಕ್ರವಾರ ಪ್ರವೇಶಿಸಿವೆ. ಈ ಹಡುಗುಗಳಿಗೆ ಹತ್ತಿರದಿಂದ ಇತರ ಎರಡು ಹಡಗುಗಳು ಬೆಂಬಲ ಒದಗಿಸಿವೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಹೇಳಿದೆ.
‘ಒಂದೇ ಚೀನಾ’ ತತ್ವಕ್ಕೆ ತೈವಾನ್ ಸವಾಲೊಡ್ಡಿದೆ:
‘ಲಾಯ್ ಅವರು ‘ಒಂದೇ ಚೀನಾ’ ತತ್ವಕ್ಕೆ ಗಂಭೀರ ಸವಾಲೊಡ್ಡಿದ್ದಾರೆ. ತೈವಾನ್‌ನಲ್ಲಿರುವ ನಮ್ಮ ದೇಶವಾಸಿಗಳನ್ನು ಯುದ್ಧದಂತಹ ಅಪಾಯ ಮತ್ತು ಅಪಾಯಕಾರಿ ಪರಿಸ್ಥಿತಿಗೆ ತಳ್ಳುತ್ತಿದ್ದಾರೆ’ ಎಂದು ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ಶುಕ್ರವಾರ ಹೇಳಿದರು.
‘ಪ್ರತಿ ಬಾರಿಯು ‘ತೈವಾನ್ ಸ್ವಾತಂತ್ರ್ಯ’ ನಮಗೆ ಪ್ರಚೋದನೆ ನೀಡುತ್ತದೆ. ಮಾತೃಭೂಮಿಯ ಸಂಪೂರ್ಣ ಪುನರ್ ಏಕೀಕರಣವನ್ನು ನಾವು ಸಾಧಿಸುವವರೆಗೆ ನಮ್ಮ ಪ್ರತಿತಂತ್ರಗಳು ಒಂದು ಹೆಜ್ಜೆ ಮುಂದಿರುತ್ತವೆ’ ಎಂದು ಅವರು ಹೇಳಿದರು.
‘ಅವರು (ತೈವಾನ್) ಅಧಿಕಾರ ವಶಪಡಿಸಿಕೊಳ್ಳುವ ನಮ್ಮ ಸಾಮರ್ಥ್ಯ, ಜಂಟಿ ದಾಳಿಗಳು ಮತ್ತು ಪ್ರಮುಖ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತಿದ್ದಾರೆ’ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಈಸ್ಟರ್ನ್ ಥಿಯೇಟರ್ ಕಮಾಂಡ್‌ನ ವಕ್ತಾರ ಲೀ ಷಿ ಹೇಳಿದ್ದಾರೆ.
ಲಾಯ್ ಅವರು ಗುರುವಾರ ಮಾಡಿದ ತಮ್ಮ ಭಾಷಣದಲ್ಲಿ ಚೀನಿ ಪಡೆಗಳ ಯುದ್ಧ ತಾಲೀಮನ್ನು ನೇರವಾಗಿ ಉಲ್ಲೇಖಿಸದೆ, ‘ತೈವಾನ್ ಅನ್ನು ರಕ್ಷಿಸಲು ತಾವು ಮುಂಚೂಣಿ ಸಾಲಿನಲ್ಲಿ ನಿಲ್ಲುತ್ತೇನೆ’ ಎಂದು ಚೀನಾಕ್ಕೆ ಸಡ್ಡುಹೊಡೆದಿದ್ದರು.
ತೈವಾನ್‌ನ ಪ್ರಮುಖ ಮಿತ್ರ ಮತ್ತು ಮಿಲಿಟರಿ ಬೆಂಬಲಿಗ ದೇಶ ಅಮೆರಿಕವು, ಚೀನಾ ಸಂಯಮದಿಂದ ವರ್ತಿಸಬೇಕೆಂದು ಗುರುವಾರ ಒತ್ತಾಯಿಸಿದೆ. ವಿಶ್ವಸಂಸ್ಥೆಯು ಸಂಘರ್ಷ ಉಲ್ಬಣಿಸುವುದನ್ನು ತಪ್ಪಿಸುವಂತೆ ಎಲ್ಲ ದೇಶಗಳಿಗೂ ಕರೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.