ಲಂಡನ್: ಚೀನಾದ ಒಟ್ಟಾರೆ ಜನಸಂಖ್ಯೆಯಲ್ಲಿ ವಯಸ್ಸಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ದಂಪತಿಗೆ ಗರಿಷ್ಠ ಮೂರು ಮಕ್ಕಳನ್ನು ಹೊಂದುವ ಅವಕಾಶವನ್ನು ಚೀನಾ ಸರ್ಕಾರ ನೀಡಿದೆ. ಆದರೆ ಚೀನಾದ ಈ ಹೊಸ ನೀತಿಯನ್ನು ಕೆಲವೇ ದುಡಿಯುವ ವರ್ಗದ ಮಹಿಳೆಯರು ಸ್ವಾಗತಿಸಿದ್ದಾರೆ.
ಮೂರನೇ ಮಗು ಹೆರುವ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನರಲ್ಲೂ ಭಿನ್ನ ಅಭಿಪ್ರಾಯ ಇದೆ. ಆದರೆ ಬಹುತೇಕ ಮಂದಿ ಮೂರನೇ ಮಗು ಬೇಡ ಎಂಬ ನಿಲುವು ತಳೆದಿರುವುದು ಆನ್‌ಲೈನ್ ಚರ್ಚೆಯ ವೇಳೆ ಗೊತ್ತಾಗಿದೆ.
ಚೀನಾದಲ್ಲಿ ಜನನ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಒಟ್ಟು ಜನಸಂಖ್ಯೆಯಲ್ಲಿ ವಯಸ್ಸಾಗುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ನವೆಂಬರ್ 2020ರ ರಾಷ್ಟ್ರೀಯ ಜನಗಣತಿಯ ಪ್ರಕಾರ ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 18.7 ರಷ್ಟು (26 ಕೋಟಿ) 60 ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆ. 2050ರೊಳಗೆ ಈ ಸಂಖ್ಯೆ 50 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಚೀನಾದಲ್ಲಿ ವಯಸ್ಸಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಅದರೊಂದಿಗೆ ಅವರ ಕಡಿಮೆ ಆದಾಯದ ಮಟ್ಟ ಮತ್ತು ದೇಶದ ಆರ್ಥಿಕ ಅಭಿವೃದ್ಧಿಯು ಚೀನಾಗೆ ತಲೆನೋವಾಗಿ ಪರಿಣಮಿಸಿದೆ.
ಚೀನಾದಲ್ಲಿ ಜೀವನ ಮಟ್ಟ ಸುಧಾರಣೆಯಾಗಿದೆ. ಇದರಿಂದಾಗಿ ಜನರ ಜೀವಿತಾವಧಿಯು ಹೆಚ್ಚಿದೆ. ಚೀನಾವು 1979ರಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸಲು ‘ಒಂದೇ ಮಗು’ ನೀತಿಯನ್ನು ಜಾರಿಗೆ ತಂದಿತು. ಇದುವೇ ವಯಸ್ಸಾಗುತ್ತಿರುವ ಜನಸಂಖ್ಯೆಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ನಾಲ್ಕು ದಶಕಗಳವರೆಗೆ ಈ ನೀತಿ ಜಾರಿಯಲ್ಲಿತ್ತು. ಒಬ್ಬ ವ್ಯಕ್ತಿಯ ಮೇಲೆ ಇಬ್ಬರು ಪೋಷಕರು ಮತ್ತು ನಾಲ್ಕು ಅಜ್ಜ, ಅಜ್ಜಿಯಂದಿರ ಜವಾಬ್ದಾರಿಯಿದೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಸರ್ಕಾರವು 2015ರಲ್ಲಿ ಒಂದೇ ಮಗುವಿನ ನೀತಿಯನ್ನು ರದ್ದುಗೊಳಿಸಿ, ಎರಡು ಮಕ್ಕಳಿಗೆ ಅವಕಾಶ ನೀಡಿತು.
ಆದರೆ ಶೇಕಡ 5 ರಿಂದ 6ರಷ್ಟು ದಂಪತಿಗಳು ಮಾತ್ರ ಎರಡು ಮಕ್ಕಳ ನೀತಿಯನ್ನು ಸ್ವೀಕರಿಸಿದರು. ಇದೀಗ ಸರ್ಕಾರ ಜಾರಿಗೆ ತಂದಿರುವ ಮೂರು ಮಕ್ಕಳ ನೀತಿಯು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.