ADVERTISEMENT

ಬಾಹ್ಯಾಕಾಶ ನಿಲ್ದಾಣದಲ್ಲಿ 6 ತಿಂಗಳು ಕಳೆದು ಹಿಂತಿರುಗಿದ ಚೀನಾದ 3 ಗಗನಯಾತ್ರಿಗಳು

ಪಿಟಿಐ
Published 16 ಏಪ್ರಿಲ್ 2022, 8:19 IST
Last Updated 16 ಏಪ್ರಿಲ್ 2022, 8:19 IST
ಡೊಂಗ್‌ಫೆಂಗ್‌: ಭೂಮಿಗೆ ಬಂದಿಳಿದ ಶೆನ್‌ಝೌ-13 ಕ್ಯಾಪ್ಸೂಲ್‌ನ ಎದುರು ಕುಳಿತು ಸಂಭ್ರಮಿಸಿದ ಚೀನಾದ ಗಗನಯಾತ್ರಿ ಯೆ ಗುವಾಂಗ್‌ಫು. ಚೀನಾದ ಕ್ಸಿನ್‌ಹುವಾ ನ್ಯೂಸ್‌ ಏಜೆನ್ಸಿ ಬಿಡುಗಡೆ ಮಾಡಿದ ಚಿತ್ರ. ಎಪಿ/ಪಿಟಿಐ
ಡೊಂಗ್‌ಫೆಂಗ್‌: ಭೂಮಿಗೆ ಬಂದಿಳಿದ ಶೆನ್‌ಝೌ-13 ಕ್ಯಾಪ್ಸೂಲ್‌ನ ಎದುರು ಕುಳಿತು ಸಂಭ್ರಮಿಸಿದ ಚೀನಾದ ಗಗನಯಾತ್ರಿ ಯೆ ಗುವಾಂಗ್‌ಫು. ಚೀನಾದ ಕ್ಸಿನ್‌ಹುವಾ ನ್ಯೂಸ್‌ ಏಜೆನ್ಸಿ ಬಿಡುಗಡೆ ಮಾಡಿದ ಚಿತ್ರ. ಎಪಿ/ಪಿಟಿಐ   

ಬೀಜಿಂಗ್‌: ಕಳೆದ 6 ತಿಂಗಳಿಂದ ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿದ್ದ (ಟಿಯಾನ್‌ಗಾಂಗ್‌ ಸ್ಪೇಸ್‌ ಸ್ಟೇಷನ್‌) ಮೂವರು ಚೀನಾ ಗಗನಯಾತ್ರಿಗಳು ಶನಿವಾರ ಸುರಕ್ಷಿತವಾಗಿ ಭೂಮಿಗೆ ಹಿಂತಿರುಗಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲಿ ಅತಿಹೆಚ್ಚು ದಿನಗಳ ಕಾಲ ಕಳೆದ ದಾಖಲೆಯನ್ನು ನಿರ್ಮಿಸಿದ್ದಾರೆ.

ಗಗನಯಾತ್ರಿಗಳಾದ ಝೈ ಝಿಗಾಂಗ್‌, ವಾಂಗ್‌ ಯಾಪಿಂಗ್‌ ಮತ್ತು ಯೆ ಗುವಾಂಗ್‌ಫು ಅವರನ್ನು ಹೊತ್ತ ಶೆನ್‌ಝೌ-13 ಕ್ಯಾಪ್ಸೂಲ್‌ (Shenzhou-13 capsule) ಚೀನಾದ ಸ್ಥಳೀಯ ಕಾಲಮಾನ ಬೆಳಿಗ್ಗೆ 9.56ಕ್ಕೆ ಗೊಬಿ ಮರುಭೂಮಿಯಲ್ಲಿರುವ ಡೊಂಗ್‌ಫೆಂಗ್‌ ಲ್ಯಾಂಡಿಂಗ್‌ ಪ್ರದೇಶದಲ್ಲಿ ಬಂದಿಳಿಯಿತು ಎಂದು ಅಲ್ಲಿನ ಮಾಧ್ಯಮ 'ಕ್ಸಿನ್‌ಹುವಾ ನ್ಯೂಸ್‌ ಏಜೆನ್ಸಿ' ವರದಿ ಮಾಡಿದೆ.

ಗಗನಯಾತ್ರಿಗಳು ಆರೋಗ್ಯದಿಂದ ಇರುವುದಾಗಿ ವೈದ್ಯಕೀಯ ಪರೀಕ್ಷೆಗಳು ದೃಢಪಡಿಸಿವೆ. ಮಾನವ ಸಹಿತ ಶೆನ್‌ಝೌ-13 ಯೋಜನೆಯು ಯಶಸ್ವಿಯಾಗಿದೆ ಎಂದು 'ಗ್ಲೋಬಲ್‌ ಟೈಮ್ಸ್‌ ನ್ಯೂಸ್‌ಪೇಪರ್' ವರದಿ ಮಾಡಿದೆ.

ADVERTISEMENT

ಈ ಹಿಂದೆ ಶೆನ್‌ಝೌ-12 ಯೋಜನೆಯಲ್ಲಿ ಗಗನಯಾತ್ರಿಗಳು 92 ದಿನಗಳನ್ನು ಟಿಯಾನ್‌ಗಾಂಗ್‌ ಸ್ಪೇಸ್‌ ಸ್ಟೇಷನ್‌ನಲ್ಲಿ ಕಳೆದಿದ್ದರು. ಇದೀಗ ಗಗನಯಾತ್ರಿಗಳು ಹಿಂದಿನ ದಾಖಲೆಗಿಂತ ಎರಡು ಪಟ್ಟು ಹೆಚ್ಚು ದಿನಗಳನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆದಂತಾಗಿದೆ.

ಗಗನಯಾತ್ರಿಗಳು ಕೇವಲ 8 ಗಂಟೆಗಳಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ವಾಪಸ್‌ ಆಗಿದ್ದಾರೆ. ಕಳೆದ ಬಾರಿಯ ಯೋಜನೆಯಲ್ಲಿ ಬಾಹ್ಯಾಕಾಶದಿಂದ ವಾಪಸ್‌ ಆಗಲು 28 ಗಂಟೆಗಳನ್ನು ತೆಗೆದುಕೊಳ್ಳಲಾಗಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶೆನ್‌ಝೌ 13 ಸಿಬ್ಬಂದಿ ಬಾಹ್ಯಾಕಾಶ ಯಾತ್ರೆ ಆರಂಭಿಸಿದ್ದರು. ಒಟ್ಟು 6 ತಿಂಗಳು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಸಮಯ ಕಳೆದಿದ್ದಾರೆ. ಈ ಸಂದರ್ಭ ಸ್ಪೇಸ್‌ವಾಕ್‌ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಆಗತ್ಯವಿದ್ದ ಕ್ಯಾಮೆರಾಗಳು, ಮ್ಯಾಕಾನಿಕಲ್‌ ಸಲಕರಣೆಗಳು ಸೇರಿದಂತೆ ಅನೇಕ ಪರಿಕರಗಳನ್ನು ಅಳವಡಿಸಿದ್ದಾರೆ. ನವೆಂಬರ್‌ನಲ್ಲಿ ವಾಂಗ್‌ ಅವರು ಸ್ಪೇಸ್‌ವಾಕ್‌ ಮಾಡಿದ ಚೀನಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.