ಕ್ಯಾನ್ಬೆರಾ: ದೇಶದ ರಹಸ್ಯ ಮಾಹಿತಿಗಳನ್ನು ವಿದೇಶಗಳಿಗೆ ಸೋರಿಕೆ ಮಾಡುತ್ತಿದ್ದ ಶಂಕೆಯ ಮೇಲೆ ಚೀನಾ ಸೆಂಟ್ರಲ್ ಟೆಲಿವಿಷನ್(ಸಿಸಿಟಿ)ನ ಇಂಗ್ಲಿಷ್ ಭಾಷೆಯ ಸಿಜಿಟಿಎನ್ ವಾಹನಿಗಾಗಿ ಕೆಲಸ ಮಾಡುತ್ತಿದ್ದ ಆಸ್ಟ್ರೇಲಿಯಾ ಮೂಲದ ಪತ್ರಕರ್ತೆಯನ್ನು ಚೀನಾ ಸರ್ಕಾರ ಔಪಚಾರಿಕವಾಗಿ ಬಂಧಿಸಿದೆ ಎಂದು ಆಸ್ಟ್ರೇಲಿಯಾ ವಿದೇಶಾಂಗ ಸಚಿವರು ಸೋಮವಾರ ತಿಳಿಸಿದ್ದಾರೆ.
ಚೀನಾ ಮೂಲದ ಆಸ್ಟ್ರೇಲಿಯಾ ವರದಿಗಾರ್ತಿ ಚೆಂಗ್ ಲೀ ಬಂಧಿತರು. ಈಕೆಯನ್ನು ಆರು ತಿಂಗಳ ಹಿಂದೆ ಬಂಧಿಸಲಾಗಿದ್ದು, ಕಳೆದ ಶುಕ್ರವಾರದಿಂದ ಆಕೆಯ ವಿರುದ್ಧವಿರುವ ಅಪರಾಧಗಳ ಕುರಿತು ತನಿಖೆ ಆರಂಭಿಸಲಾಗಿದೆ.
‘ಚೆಂಗ್ ಅವರ ಬಂಧನದ ಬಗ್ಗೆಆಸ್ಟ್ರೇಲಿಯಾ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಸಾರವಾಗಿ, ಬಂಧಿತ ಚೆಂಗ್ ಲೀ ಅವರಿಗೆ ಮೂಲಸೌಭ್ಯಗಳನ್ನು ಪೂರೈಸಬೇಕೆಂದು ನಾವು ನಿರೀಕ್ಷಿಸುತ್ತೇವೆ‘ ಎಂದು ವಿದೇಶಾಂಗ ಸಚಿವ ಮಾರಿಸ್ ಪೇನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊರೊನಾವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ಆಸ್ಟ್ರೇಲಿಯಾ ಒತ್ತಾಯಿಸಿದ ಕಾರಣ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಡುತ್ತಿದ್ದು, ಇದೂ ಕೂಡ ಚೆಂಗ್ ಬಂಧನಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಚೀನಾ ಮೂಲದ ಚೆಂಗ್ ಲೀ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ತನ್ನಿಬ್ಬರು ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ನೆಲೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.