ಬೀಜಿಂಗ್: 13 ವರ್ಷದ ಚೀನಾ ಬಾಲಕಿಯೊಬ್ಬಳು ಚೀನಾದಲ್ಲಿ ಭರತನಾಟ್ಯ ‘ಅರಂಗೇಟ್ರ’ ಪ್ರದರ್ಶನ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾಳೆ.
ಇದು ನೆರೆಯ ದೇಶದಲ್ಲಿ ಜನಪ್ರಿಯತೆ ಗಳಿಸುತ್ತಿರುವ ಪ್ರಾಚೀನ ಭಾರತೀಯ ನೃತ್ಯ ಪ್ರಕಾರದ ಪಯಣದ ಹೆಗ್ಗುರುತಾಗಿದೆ ಎಂದು ವರದಿ ತಿಳಿಸಿದೆ.
ಖ್ಯಾತ ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್, ಭಾರತೀಯ ರಾಜತಾಂತ್ರಿಕರು ಮತ್ತು ಕಿಕ್ಕಿರಿದು ಸೇರಿದ್ದ ಚೀನಾದ ಭರತನಾಟ್ಯ ಅಭಿಮಾನಿಗಳ ಸಮ್ಮುಖದಲ್ಲಿ ಲೀ ಮುಝಿ ಎಂಬ ಬಾಲಕಿ ರಂಗಪ್ರವೇಶ ಮಾಡಿದರು.
ನೃತ್ಯ ಕಲಿಯಲು ದಶಕಗಳ ಕಾಲ ತಮ್ಮ ಜೀವನವನ್ನು ಮುಡಿಪಾಗಿಟ್ಟ ಲೀ ಪ್ರದರ್ಶನವು ಭಾರತೀಯ ಶಾಸ್ತ್ರೀಯ ಕಲೆ ಮತ್ತು ನೃತ್ಯ ಪ್ರಕಾರಗಳ ಉತ್ಕಟ ಚೀನೀ ಅಭಿಮಾನಿಗಳಿಗೆ ಇದೊಂದು ಅದ್ಭುತ ಕ್ಷಣವಾಗಿತ್ತು. ಇದು ಚೀನಾದಲ್ಲಿ ಮೊದಲ ಬಾರಿಗೆ ನಡೆದ ‘ಅರಂಗೇಟ್ರಂ’ಭರತನಾಟ್ಯದ ಕಾರ್ಯಕ್ರಮವಾಗಿತ್ತು.
ಪ್ರೇಕ್ಷಕರನ್ನು ಹೊರತುಪಡಿಸಿ ಶಿಕ್ಷಕರು ಮತ್ತು ತಜ್ಞರ ಮುಂದೆ ವೇದಿಕೆಯಲ್ಲಿ ನೃತ್ಯ ಕಲಾವಿದರ ಚೊಚ್ಚಲ ಪ್ರದರ್ಶನವನ್ನು ‘ಆರಂಗೇಟ್ರಂ’ ಎಂದು ಕರೆಯಲಾಗುತ್ತದೆ. ಆರಂಗೇಟ್ರಂ ನಂತರವೇ ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಪ್ರದರ್ಶನ ನೀಡಲು ಅಥವಾ ಇತರರಿಗೆ ನೃತ್ಯ ತರಬೇತಿ ನೀಡಲು ಅವಕಾಶ ನೀಡಲಾಗುತ್ತದೆ.
‘ಚೀನಾದ ಸಂಪೂರ್ಣ ತರಬೇತಿ ಪಡೆದ ವಿದ್ಯಾರ್ಥಿನಿಯೊಬ್ಬರು ಚೀನಾದಲ್ಲಿ ನೀಡಿದ ಮೊದಲ ‘ಆರಂಗೇಟ್ರಂ’ ಪ್ರದರ್ಶನ ಇದಾಗಿದೆ’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತೀಯ ರಾಯಭಾರ ಕಚೇರಿಯ ಸಂಸ್ಕೃತಿ ವಿಭಾಗದ ಉಸ್ತುವಾರಿ ವಹಿಸಿರುವ ಕಾರ್ಯದರ್ಶಿ ಟಿ ಎಸ್ ವಿವೇಕಾನಂದ್ ಹೇಳಿದ್ದಾರೆ.
ಅತ್ಯಂತ ಸಾಂಪ್ರದಾಯಿಕ ವಿಧಾನದಲ್ಲಿ ಅಚ್ಚುಕಟ್ಟಾಗಿ ನಡೆದ ಆರಂಗೇಟ್ರಂ ಇದಾಗಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಲೀ ಮುಝಿ ನೀಡಿದ ಈ ಆರಂಗೇಟ್ರಂ ಪ್ರದರ್ಶನವು ಚೀನಾದ ಶಿಕ್ಷಕರಿಂದಲೇ ತರಬೇತಿ ಪಡೆದ ಚೀನೀ ವಿದ್ಯಾರ್ಥಿಯೊಬ್ಬರು ನೀಡಿದ ಮೊದಲ ಪ್ರದರ್ಶನವಾಗಿದೆ. ಭರತನಾಟ್ಯ ಪರಂಪರೆಯ ಇತಿಹಾಸದಲ್ಲಿ ಇದೊಂದು ಹೆಗ್ಗುರುತಾಗಿದೆ ಎಂದು ಲೀ ಅವರಿಗೆ ಭರತನಾಟ್ಯ ತರಬೇತಿ ನೀಡಿದ ಚೀನಾದ ಖ್ಯಾತ ಭರತನಾಟ್ಯ ಕಲಾವಿದೆ ಜಿನ್ ಶಾನ್ ಹೇಳಿದ್ದಾರೆ.
ಭಾರತದ ರಾಯಭಾರಿ ಪ್ರದೀಪ್ ರಾವತ್ ಅವರ ಪತ್ನಿ ಶ್ರುತಿ ರಾವತ್ ಅವರು ಲೀ ಅವರ ಅರಂಗೇಟ್ರಂನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಪಾರ ಸಂಖ್ಯೆಯ ಅಭಿಮಾನಿಗಳು ಸಹ ಭಾಗವಹಿಸಿದ್ದರು, ಎರಡು ಗಂಟೆಗಳ ಅವಧಿಯ ಪ್ರದರ್ಶನದಲ್ಲಿ ಲೀ ಅಭಿಮಾನಿಗಳನ್ನು ರಂಜಿಸಿದರು.
ಲೀಲಾ ಸ್ಯಾಮ್ಸನ್ ಜೊತೆಗೆ, ಚೆನ್ನೈನಿಂದ ಆಗಮಿಸಿದ್ದ ಸಂಗೀತಗಾರರ ತಂಡವು ಶಾಸ್ತ್ರೀಯ ಸಂಗೀತ ಪ್ರದರ್ಶನ ನೀಡಿತು.
ಈ ತಿಂಗಳ ಅಂತ್ಯದಲ್ಲಿ ಚೆನ್ನೈನಲ್ಲೂ ಲೀ ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ.
1999ರಲ್ಲಿ ನವದೆಹಲಿಯಲ್ಲಿ ತನ್ನ ಆರಂಗೇಟ್ರಂ ಪ್ರದರ್ಶನ ನೀಡಿದ್ದ ಚೀನಾದ ಮೊದಲ ಖ್ಯಾತ ಭರತ ನಾಟ್ಯ ಕಲಾವಿದೆ ಜಿನ್ ನಡೆಸುತ್ತಿರುವ ಭರತ ನಾಟ್ಯ ಶಾಲೆಯಲ್ಲಿ ಲೀ 10 ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.