ಬೀಜಿಂಗ್: ಅಲಿಬಾಬಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಕೋಟ್ಯಧಿಪತಿ ಜಾಕ್ ಮಾ ಎರಡು ತಿಂಗಳುಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ಎಂದು ವರದಿಯಾಗಿದೆ. ಅವರು ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸುವ ಮೂಲಕ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು.
ಶಾಂಘೈ ಮತ್ತು ಹಾಂಕಾಂಗ್‌ಗಳಲ್ಲಿ ಜಾಕ್ ಮಾ ಅವರ ‘ಆಂಟ್’ ಗ್ರೂಪ್‌ನ 3,700 ಕೋಟಿ ಡಾಲರ್ ಐಪಿಒಗಳನ್ನು ಈಚೆಗೆ ಅಮಾನತುಗೊಳಿಸಲಾಗಿತ್ತು.
ತಾವೇ ಆಯೋಜಿಸಿದ್ದ ಟ್ಯಾಲೆಂಟ್ ಶೋ ‘ಆಫ್ರಿಕಾಸ್ ಬ್ಯುಸಿನೆಸ್ ಹೀರೋಸ್’ನ ಅಂತಿಮ ಎಪಿಸೋಡ್ನಲ್ಲಿಯೂ ಜಾಕ್ ಮಾ ಕಾಣಿಸಿಕೊಂಡಿಲ್ಲ. ಜಾಕ್ ಮಾ ಒಡೆತನದ ಅಲಿಬಾಬಾ ಮತ್ತು ಇತರ ಕಂಪನಿಗಳ ಮೇಲೆ ಚೀನಾ ಸರ್ಕಾರವು ಇತ್ತೀಚೆಗೆ ಹಲವು ನಿರ್ಬಂಧಗಳನ್ನೂ ವಿಧಿಸಿತ್ತು.
ವಾರ್ಷಿಕ ನೂರಾರು ಕೋಟಿ ಡಾಲರ್ ವ್ಯವಹಾರ ನಡೆಸುತ್ತಿರುವ ಜಾಕ್ ಮಾ ಒಡೆತನದ ಕಂಪನಿಗಳು ಅನೇಕ ಕ್ಷೇತ್ರಗಳಿಗೆ ಉದ್ಯಮವನ್ನು ವಿಸ್ತರಿಸಿಕೊಂಡಿವೆ. ಭಾರತದಲ್ಲಿ ಪೇಟಿಎಂ, ಪೇಟಿಎಂ ಮಾಲ್, ಜೊಮಾಟೊ, ಬಿಗ್ ಬಾಸ್ಕೆಟ್ ಹಾಗೂ ಇ–ಕಾಮರ್ಸ್ ಕಂಪನಿ ಸ್ನ್ಯಾಪ್‌ಡೀಲ್‌ನಲ್ಲಿ ಅಲಿಬಾಬಾ ಹೂಡಿಕೆ ಮಾಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲಿಬಾಬಾ ಗ್ರೂಪ್ ವಿರುದ್ಧ ಚೀನಾ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಸಾಲ ಮತ್ತು ಗ್ರಾಹಕ ಹಣಕಾಸು ಕಾರ್ಯಾಚರಣೆಯನ್ನು ಮರುರೂಪಿಸುವಂತೆ ಚೀನಾದ ಕೇಂದ್ರ ಬ್ಯಾಂಕ್ ಕಂಪನಿಗೆ ಸೂಚಿಸಿತ್ತು.
ಅಕ್ಟೋಬರ್‌ನಲ್ಲಿ ಜಾಕ್ ಮಾ ಚೀನಾ ಸರ್ಕಾರವನ್ನು ಹಾಗೂ ಸರ್ಕಾರಿ ಸಂಸ್ಥೆಗಳನ್ನು ಟೀಕಿಸಿದ್ದರು. ಬಳಿಕ ಅವರು ಚೀನಾ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದರು. ಶಾಂಘೈ ಮತ್ತು ಹಾಂಕಾಂಗ್‌ಗಳಲ್ಲಿ ‘ಆಂಟ್’ ಗ್ರೂಪ್‌ನ 3,700 ಕೋಟಿ ಡಾಲರ್ ಐಪಿಒಗಳನ್ನು ಅಮಾನತುಗೊಳಿಸಿದ್ದು ಅವರಿಗೆ ದೊಡ್ಡ ಹಿನ್ನಡೆಯುಂಟು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.