ADVERTISEMENT

ಆಸ್ಟ್ರೇಲಿಯಾ ಜೊತೆ ಸಂಬಂಧ ಸುಧಾರಣೆಗೆ ಒತ್ತು: ಚೀನಾ ‍ಪ್ರಧಾನಿ ಲಿ ಕಿಯಾಂಗ್

ಏಜೆನ್ಸೀಸ್
Published 17 ಜೂನ್ 2024, 14:42 IST
Last Updated 17 ಜೂನ್ 2024, 14:42 IST
ಚೀನಾ ಪ್ರಧಾನಿ ಲಿ ಕೆಖಿಯಾಂಗ್‌
ಚೀನಾ ಪ್ರಧಾನಿ ಲಿ ಕೆಖಿಯಾಂಗ್‌   

ಮೆಲ್ಬರ್ನ್‌: ಕೆಲವು ವರ್ಷಗಳಿಂದ ಆಸ್ಟ್ರೇಲಿಯಾದ ರಫ್ತಾಗಬೇಕಿದ್ದ, ₹1.86 ಲಕ್ಷ ಕೋಟಿ ಮೌಲ್ಯದ ವಸ್ತುಗಳಿಗೆ ಚೀನಾ ನಿಷೇಧ ಹೇರಿತ್ತು. ಈಗ ಚೀನಾ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಸಚಿವರ ನಡುವೆ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ನಿರ್ಧರಿಸಿದೆ.

ಚೀನಾ ‍ಪ್ರಧಾನಿ ಲಿ ಕಿಯಾಂಗ್ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ರಾಜಧಾನಿ ಕ್ಯಾನ್‌ಬೆರಾದಲ್ಲಿ ಸೋಮವಾರ ನಡೆಸಿದ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಕಳೆದ ಏಳು ವರ್ಷಗಳಲ್ಲಿ ಚೀನಾ ಪ್ರಧಾನಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾಗೆ ಭೇಟಿ ನೀಡಿದ್ದಾರೆ.

ಆಸ್ಟ್ರೇಲಿಯಾದ ಸಂಸತ್‌ ಭವನದಲ್ಲಿ ಭೇಟಿಯಾದ ಉಭಯ ರಾಷ್ಟ್ರಗಳ ಮುಖಂಡರು, ಜಟಿಲ ಸಮಸ್ಯೆಗಳು, ದೀರ್ಘಕಾಲದ ವ್ಯಾವಹಾರಿಕ ಅಡೆತಡೆಗಳು, ಅಂತರರಾಷ್ಟ್ರೀಯ ಜಲ ವಿವಾದ–ಸೇನಾ ಸಂಘರ್ಷ ಕುರಿತು ಚರ್ಚಿಸಿದರು. ಅಪರೂಪದ ಖನಿಜ ಸಂಪನ್ಮೂಲಗಳ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವುದಾಗಿ ಚೀನಾ ತನ್ನ ನಿಲುವು ಪ್ರತಿಪಾದಿಸಿತು.

ADVERTISEMENT

ಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಲಿ ಕಿಯಾಂಗ್, ‘ಉಭಯ ರಾಷ್ಟ್ರಗಳ ಸಂಬಂಧವನ್ನು ಹಂತ ಹಂತವಾಗಿ ಸುಧಾರಿಸುವ ನಿಟ್ಟಿನಲ್ಲಿ ಸರಿಯಾದ ದಾರಿಯಲ್ಲಿದ್ದೇನೆ. ನಮ್ಮ ಭಿನ್ನಾಭಿಪ್ರಾಯಗಳನ್ನು ಸೂಕ್ತ ರೀತಿಯಲ್ಲಿ ಬರೆಹರಿಸಿಕೊಳ್ಳಲಿದ್ದು, ಸಮಗ್ರ ಪಾಲುದಾರಿಕೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಒಪ್ಪಿದ್ದೇವೆ’ ಎಂದು ತಿಳಿಸಿದರು.

‘ಸಭೆಯು ಫಲಪ್ರದವಾಗಿದೆ’ ಎಂದು ಆಂಥೋನಿ ಅಲ್ಬನೀಸ್ ಬಣ್ಣಿಸಿದರು.

ಚೀನಾಕ್ಕೆ ಆಸ್ಪ್ರೇಲಿಯಾದಿಂದ ರಫ್ತಾಗಬೇಕಿದ್ದ ಕಲ್ಲಿದ್ದಲು, ಹತ್ತಿ, ವೈನ್‌, ಬಾರ್ಲಿ ಮೇಲೆ 2020ರಿಂದ ನಿಷೇಧ ಹೇರಲಾಗಿತ್ತು. 2022ರಲ್ಲಿ ಆಂಥೋನಿ ಅಲ್ಬನೀಸ್ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಚೀನಾ ನಿಷೇಧವನ್ನು ಹಿಂದಕ್ಕೆ ಪಡೆದಿತ್ತು.

ಹಡಗು ಡಿಕ್ಕಿಗೆ ಫಿಲಿಪ್ಪೀನ್ಸ್ ಕಾರಣ: ದಕ್ಷಿಣ ಚೀನಾ ಸಮುದ್ರದ ವಿವಾದಿತ ಸ್ಟ್ರಾಟ್ಲಿ ದ್ವೀಪದಲ್ಲಿ ಚೀನಾದ ಹಡಗು ಹಾಗೂ ಫಿಲಿಪ್ಪೀನ್ಸ್‌ನ ಸರಕು ಸಾಗಣೆ ಹಡಗುಗಳ ನಡುವೆ ಡಿಕ್ಕಿ ಆಗಿದ್ದು, ಇದಕ್ಕೆ ಫಿಲಿಪ್ಪೀನ್ಸ್‌ ಕಾರಣ ಎಂದು ಚೀನಾದ ಕರಾವಳಿ ಪಡೆ ತಿಳಿಸಿದೆ.

ಫಿಲಿಪ್ಪೀನ್ಸ್‌ ಸರಕು ಸಾಗಣೆ ಹಡಗು ವಿವಾದಿತ ಸ್ಟ್ರಾಟ್ಲಿ ದ್ವೀಪದ ಬಂಡೆಗಳಿಂದ ಆವೃತ್ತವಾದ ಪ್ರದೇಶವನ್ನು ಪ್ರವೇಶಿಸುವ ವೇಳೆಯಲ್ಲೇ ಚೀನಾ ಹಲವು ಬಾರಿ ಎಚ್ಚರಿಸಿತ್ತು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಫಿಲಿಪ್ಪೀನ್ಸ್‌ ಸರ್ಕಾರ, ‘ಇದು ಮೋಸ ಹಾಗೂ ತಪ್ಪುದಾರಿಗೆ ಎಳೆಯುವ ಅಭಿಪ್ರಾಯವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.