ADVERTISEMENT

ಜಿನ್‌ಪಿಂಗ್ ಟಿಬೆಟ್‌ ಭೇಟಿ ಭಾರತಕ್ಕೆ ಅಪಾಯದ ಮುನ್ಸೂಚನೆ: ಅಮೆರಿಕ ಸಂಸದ

ಪಿಟಿಐ
Published 27 ಜುಲೈ 2021, 4:26 IST
Last Updated 27 ಜುಲೈ 2021, 4:26 IST
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್: ಎಎಫ್‌ಪಿ ಚಿತ್ರ
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್: ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಕಳೆದ ವಾರ ಟಿಬೆಟ್‌ಗೆ ಭೇಟಿ ನೀಡಿದ್ದು ಭಾರತಕ್ಕೆ ಅಪಾಯವಾಗಿದೆ ಎಂದು ಅಮೆರಿಕದ ಪ್ರಭಾವಿ ಸಂಸತ್ ಸದಸ್ಯರೊಬ್ಬರು ಹೇಳಿದ್ದಾರೆ. ಇದೇವೇಳೆ, ಜೋ ಬೈಡೆನ್ ನೇತೃತ್ವದ ಆಡಳಿತವು ಚೀನಾದ ನಡೆ ತಡೆಯಲು ಸಾಕಷ್ಟು ಪ್ರಯತ್ನ ಮಾಡದಿರುವ ಬಗ್ಗೆ ಟೀಕಿಸಿದ್ದಾರೆ.

ಕಳೆದ ಬುಧವಾರದಿಂದ ಜಿನ್‌ಪಿಂಗ್, ಅರುಣಾಚಲ ಪ್ರದೇಶದ ಗಡಿಯ ಸಮೀಪವಿರುವ ಟಿಬೆಟ್‌ನ ನೈಂಗ್ಚಿಗೆ ಅಘೋಷಿತ ಮೂರು ದಿನಗಳ ಪ್ರವಾಸ ಮಾಡಿದರು. ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕ್ಸಿ, ಟಿಬೆಟ್ ಮಿಲಿಟರಿ ಕಮಾಂಡ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಈ ಪ್ರದೇಶದ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದರು ಎಂದು ತಿಳಿದುಬಂದಿದೆ. .

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಈ ಬಗ್ಗೆ ಪ್ರತಿಕ್ರಿಯಿಸಿರುವ, ರಿಪಬ್ಲಿಕನ್ ಪಕ್ಷದ ಕಾಂಗ್ರೆಸ್ ಸದಸ್ಯ ಡೆವಿನ್ ನುನೆಸ್, ‘ಕಳೆದ ವಾರವಷ್ಟೇ, ಭಾರತದ ಗಡಿಯ ಟಿಬೆಟ್‌ನಲ್ಲಿ ಚೀನಾದ ಸರ್ವಾಧಿಕಾರಿ ಕ್ಸಿ ಜಿನ್‌ಪಿಂಗ್ ಅವರು ವಿಜಯ ಸಾಧಿಸಿದ್ದಾರೆ. 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಚೀನಾದ ಸರ್ವಾಧಿಕಾರಿಯೊಬ್ಬರು ಟಿಬೆಟ್‌ಗೆ ಭೇಟಿ ನೀಡಿದ್ದಾರೆ. ಈ ಮೂಲಕ ಭಾರತಕ್ಕೆ ಬೆದರಿಕೆ ಒಡ್ಡಿದ್ದಾರೆ, ಬೃಹತ್ ನೀರಿನ ಯೋಜನೆಯನ್ನು ನಿರ್ಮಿಸಲು ಹೊರಟಿರುವ ಚೀನಾದ ಅಧ್ಯಕ್ಷರು ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಬಹುಶಃ ಭಾರತದ ನೀರನ್ನು ಸಂಪರ್ಕವನ್ನು ಕತ್ತರಿಸಬಹುದು.’ ಎಂದು ಅವರು ಹೇಳಿದ್ದಾರೆ.

ADVERTISEMENT

ನಿಯಿಂಗ್ಚಿಗೆ ಭೇಟಿ ನೀಡಿದ ಸಂದರ್ಭ, ಕ್ಸಿ ಅವರು ನ್ಯಾಂಗ್ ನದಿ ಸೇತುವೆಗೆ ಭೇಟಿ ನೀಡಿ, ಬ್ರಹ್ಮಪುತ್ರ ನದಿಯ ಜಲಾನಯನ ಪ್ರದೇಶದಲ್ಲಿನ ಪರಿಸರವನ್ನು ಪರಿಶೀಲಿಸಿದ್ದರು. ಇದನ್ನು ಟಿಬೆಟಿಯನ್ ಭಾಷೆಯಲ್ಲಿ ಯಾರ್ಲುಂಗ್ ಜಾಂಗ್ಬೊ ಎಂದು ಕರೆಯಲಾಗುತ್ತದೆ.

ಪ್ರಸಕ್ತ 14 ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ಬ್ರಹ್ಮಪುತ್ರ ನದಿಯ ಮೇಲೆ ಬೃಹತ್ ಅಣೆಕಟ್ಟು ನಿರ್ಮಿಸುವ ಯೋಜನೆಗಳಿಗೆ ಚೀನಾ ಈ ವರ್ಷ ಅನುಮೋದನೆ ನೀಡಿದ್ದು, ಇದು ಭಾರತ ಮತ್ತು ಬಾಂಗ್ಲಾದೇಶದ ಗಡಿಯ ರಾಜ್ಯಗಳಲ್ಲಿ ಆತಂಕವನ್ನು ಉಂಟುಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.