ಬೀಜಿಂಗ್: ಬೌದ್ಧ ಧರ್ಮಕ್ಕೆ ಸಂಬಂಧಿಸಿ ಚೀನಾದಲ್ಲಿ ದೊರೆತ ಪ್ರಾಚೀನ ಗ್ರಂಥಗಳಲ್ಲಿ ರಾಮಾಯಣದ ಉಲ್ಲೇಖಗಳಿವೆ. ಹೀಗಾಗಿ, ಚೀನಾದ ಇತಿಹಾಸದಲ್ಲಿಯೂ ಹಿಂದೂ ಧರ್ಮದ ಪ್ರಭಾವ ಇದೆ ಎಂಬುದಾಗಿ ವಿದ್ವಾಂಸರು ಇದೇ ಮೊದಲ ಬಾರಿ ಹೇಳಿದ್ದಾರೆ.
‘ರಾಮಾಯಣ– ಒಂದು ಕಾಲಾತೀತ ಮಾರ್ಗದರ್ಶಿ’ ಎಂಬ ವಿಚಾರದಲ್ಲಿ ಭಾರತೀಯ ರಾಯಭಾರ ಕಚೇರಿಯು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಚೀನಾದ ಹಲವು ವಿದ್ವಾಂಸರು ಧರ್ಮದ ಪ್ರಭಾವದ ಕುರಿತು ಮಾತನಾಡಿದ್ದಾರೆ. ರಾಮಾಯಣವು ಚೀನಾಕ್ಕೆ ತಲುಪಿದ ಕುರಿತು, ಚೀನಾದ ಕಲೆ ಮತ್ತು ಸಾಹಿತ್ಯದ ಮೇಲೆ ಪ್ರಭಾವದ ಕುರಿತು ತಮ್ಮ ದೀರ್ಘ ಕಾಲದ ಸಂಶೋಧನೆಗೆ ಸಂಬಂಧಿಸಿ ವಿದ್ವಾಂಸರು ಮಾತನಾಡಿದ್ದಾರೆ.
‘ಧಾರ್ಮಿಕ ಮತ್ತು ಜಾತ್ಯತೀತ ಜಗತ್ತುಗಳು ಬೆಸೆದುಕೊಂಡ ರೀತಿಯಲ್ಲಿ ರಾಮಾಯಣವು ಬೇರೆ ಸಂಸ್ಕೃತಿಗಳ ಮೇಲೆ ಗಣನೀಯ ಪ್ರಭಾವ ಬೀರಿದೆ’ ಎಂದು ಪ್ರಾಧ್ಯಾಪಕ ಡಾ. ಜಿಯಾಂಗ್ ಜಿಂಗ್‌ಕುಯ್ ಹೇಳಿದ್ದಾರೆ.
‘ಚೀನಾದ ಬಹುಸಂಖ್ಯಾತರ ಹ್ಯಾನ್ ಸಂಸ್ಕೃತಿಯ ಮೇಲೆಯೂ ರಾಮಾಯಣದ ಪ್ರಭಾವ ಇದೆ. ಟಿಬೆಟ್ ಸಂಸ್ಕೃತಿಯು ಈ ಮಹಾಕಾವ್ಯವನ್ನು ಮರುವ್ಯಾಖ್ಯಾನಿಸಿದ್ದು ಹೊಸ ಅರ್ಥಗಳನ್ನು ನೀಡಿದೆ’ ಎಂದು ಅವರು ವಿವರಿಸಿದ್ದಾರೆ.
ರಾಮಾಯಣವು ಬೌದ್ಧ ಧರ್ಮಗ್ರಂಥಗಳ ಮೂಲಕ ಚೀನಾಗೆ ಪ್ರವೇಶಿಸಿದೆ. ಬೌದ್ಧ ಹಸ್ತಪ್ರತಿಗಳಲ್ಲಿ ದಶರಥ ಹಾಗೂ ಹನುಮಂತನನ್ನು ಬೌದ್ಧ ಧರ್ಮೀಯ ಪಾತ್ರಗಳೆಂದು ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
‘ಚೀನಾದ ಪುರಾಣ ಕಾವ್ಯಗಳಲ್ಲಿ ಕಂಡುಬರುವ ‘ಸುನ್ ವೂಕೊಂಗ್’ ಪಾತ್ರವು ಮೂಲತಃ ರಾಮಾಯಣದ ಹನುಮಂತನದು ಎಂದು ಬಹುತೇಕ ಎಲ್ಲ ವಿದ್ವಾಂಸರೂ ಒಪ್ಪಿಕೊಳ್ಳುತ್ತಾರೆ. ಅದು ‘ಸ್ಥಳೀಯ ಪಾತ್ರ’ ಎಂದು ಕೆಲವರು ವಾದಿಸಿದರೂ, ಅದನ್ನು ಒಪ್ಪಲಾಗುವುದಿಲ್ಲ. ಹಿಂದೂ ಧಾರ್ಮಿಕ ಕೃತಿಗಳಿಂದ ಹನುಮಂತನ ಪಾತ್ರದ ಎರವಲು ಪಡೆದಿರುವುದು ಸತ್ಯ’ ಎಂದು ಮತ್ತೊಬ್ಬ ಧಾರ್ಮಿಕ ವಿದ್ವಾಂಸ ಪ್ರೊ. ಲೂ ಜಿಯನ್ ಪ್ರತಿಪಾದಿಸಿದರು.
ಚೀನಾಕ್ಕೆ ಭಾರತದ ರಾಯಭಾರಿಯಾಗಿರುವ ಪ್ರದೀಪ್ ಕುಮಾರ್ ರಾವತ್ ಮಾತನಾಡಿ, ‘ರಾಮಾಯಣ ಯಾವಾಗ ರಚನೆಯಾಗಿದೆ ಎಂಬುದನ್ನು ಇತಿಹಾಸ ತಜ್ಞರು ನಿರ್ದಿಷ್ಟವಾಗಿ ತಿಳಿಸದಿದ್ದರೂ, ರಾಮಾಯಣವನ್ನು ಕ್ರಿ.ಪೂ. 7ನೇ ಶತಮಾನದಲ್ಲಿ ರಚಿಸಲಾಗಿದೆ ಎಂದು ಜ್ಯೋತಿರ್ವಿಜ್ಞಾನದ ಅಧ್ಯಯನವೊಂದು ಹೇಳಿದೆ. ರಾಮಾಯಣವು ಮಾನವ ನಾಗರಿಕತೆಯಲ್ಲಿಯೇ ಅತಿ ಹಳೆಯ ಸಾಹಿತ್ಯವೆಂದು ನಂಬಲಾಗಿದೆ’ ಎಂದು ಹೇಳಿದರು.
ಚೀನಾಕ್ಕೆ ಥಾಯ್ಲೆಂಡ್‌ನ ರಾಯಭಾರಿ ಚಟ್ಚಾಯ್ ವಿರಿಯವೆಜಕುಲ್, ಇಂಡೋನೇಷ್ಯಾದ ಉಪ ರಾಯಭಾರಿ ಪೆರುಲಿಯನ್ ಜಾರ್ಜ್ ಅವರು ತಮ್ಮ ದೇಶಗಳ ಮೇಲೆ ರಾಮಾಯಣ ಬೀರಿರುವ ಪ್ರಭಾವದ ಬಗ್ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.