ವಾಷಿಂಗ್ಟನ್: ‘ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆಗೆ ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಆದೇಶ ನೀಡಿದ್ದರು ಎಂದು ಅಮೆರಿಕ ಕೇಂದ್ರಿಯ ಗುಪ್ತಚರ ಸಂಸ್ಥೆಯು (ಸಿಐಎ) ನಿರ್ಧಾರಕ್ಕೆ ಬಂದಿದೆ’ಎಂದು ಅಮೆರಿಕದ ಪತ್ರಿಕೆಯೊಂದು ವರದಿ ಮಾಡಿದೆ.
‘ಸೌದಿ ಸರ್ಕಾರದ 15 ಮಂದಿ ಏಜೆಂಟರು, ಸರ್ಕಾರದ ವಿಮಾನದಲ್ಲಿ ಇಸ್ತಾಂಬುಲ್‌ನ ಸೌದಿ ರಾಯಭಾರ ಕಚೇರಿಗೆ ಬಂದುಖಶೋಗ್ಗಿಯನ್ನು ಹತ್ಯೆ ಮಾಡಿದ್ದರುಎಂದು ಸಿಐಎ ನಡೆಸಿದ ತನಿಖೆಯಲ್ಲಿ ಕಂಡುಕೊಂಡಿದೆ’ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಮೊಹಮ್ಮದ್ ಸಲ್ಮಾನ್ ಗಮನಕ್ಕೆ ಬಾರದೇ, ಇಂತಹ ಘಟನೆ ನಡೆದಿದೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅಮೆರಿಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟರ್ಕಿ ಯುವತಿಯನ್ನು ವಿವಾಹವಾಗಲು ಅಗತ್ಯ ದಾಖಲೆಗಳನ್ನು ಪಡೆಯಲು ರಾಯಭಾರ ಕಚೇರಿಗೆ ಖಶೋಗ್ಗಿ ತೆರಳಿದ್ದಾಗ ಅವರ ಹತ್ಯೆ ನಡೆದಿತ್ತು ಎನ್ನಲಾಗಿದೆ.
ಈ ಆರೋಪವನ್ನು ಸೌದಿ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ‘ಮೊದಲ ದಿನದಿಂದಲೂ ಹಲವು ರೀತಿಯ ಊಹಾಪೋಹಗಳನ್ನು ಹರಿದುಬಿಡಲಾಗುತ್ತಿದೆ. ಈಗ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ’ ಎಂದು ವಾಷಿಂಗ್ಟನ್‌ನಲ್ಲಿರುವ ಸೌದಿ ರಾಯಭಾರಿ ಕಚೇರಿಯ ವಕ್ತಾರೆ ಫಾತಿಮಾ ಬಶೆನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.