ವಾಷಿಂಗ್ಟನ್: ಹವಾಮಾನ ಬದಲಾವಣೆ ಕುರಿತ ವಿಷಯವು ನಮ್ಮ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯ ಕೇಂದ್ರವಾಗಲಿದೆ ಎಂದಿರುವ ಜೋ ಬೈಡನ್ ಅವರು, ಈ ಕುರಿತ ಕಾರ್ಯಾದೇಶಗಳಿಗೆ ಸಹಿ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹವಾಮಾನ ಬದಲಾವಣೆ ಎಂಬುದು ಈ ಯುಗದದಲ್ಲಿ ಎದುರಾಗಿರುವ ಪ್ರಮುಖ ಭೀತಿಗಳಲ್ಲಿ ಒಂದು. ಇದರಿಂದ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಈ ಕಾರ್ಯಾದೇಶಗಳು ನೆರವಾಗಲಿವೆ‘ ಎಂದರು.
ಮಾಜಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ‍್ರಿ ಅವರನ್ನು ಹವಾಮಾನ ಬದಲಾವಣೆಯ ವಿಶೇಷ ರಾಯಭಾರಿಯಾಗಿ ನೇಮಿಸಿರುವ ಅಧ್ಯಕ್ಷ ಜೋ ಬೈಡನ್ ಅವರು, ‘ಈ ಮೂಲಕ ನಾವು ಹವಾಮಾನ ಬದಲಾವಣೆ ಕುರಿತು ಎಷ್ಟು ಗಂಭೀರವಾಗಿದ್ದೇವೆ ಎಂಬುದು ಜಗತ್ತಿಗೆ ತಿಳಿದಂತಾಗಿದೆ‘ ಎಂದು ಹೇಳಿದ್ದಾರೆ.
‘ಹವಾಮಾನ ಬದಲಾವಣೆ ಕುರಿತ ಪ್ಯಾರಿಸ್ ಹವಾಮಾನ ಒಪ್ಪಂದದ ಮಾತುಕತೆಯಲ್ಲಿ ಕೆರ‍್ರಿ ಪ್ರಮುಖ ಪಾತ್ರವಹಿಸಲಿದ್ದಾರೆ. ಮತ್ತೆ ಅವರು ಆಡಳಿತದೊಳಗೆ ಸೇರಿಕೊಂಡಿದ್ದಾರೆ‘ ಎಂದು ಬೈಡನ್ ತಿಳಿಸಿದ್ದಾರೆ.
‘ಇಂದು ಸಹಿ ಹಾಕಿರುವ ಕಾರ್ಯಾದೇಶಗಳು, ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿರುವ ದುರ್ಬಲ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಸಂಘಟಿತವಾಗಿ ಹೋರಾಡಲು ನೆರವಾಗುತ್ತವೆ‘ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.